image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

ಮೂಡುಬಿದಿರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ   ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ಮೂರು ದಿನಗಳ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ 23ನೇ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟ 2025-26  ಸ್ವರಾಜ್ ಮೈದಾನದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.


ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ರೀಡಾ ವಿಭಾಗದ ಕುಲಸಚಿವ ಡಾ ವಸಂತ ಶೆಟ್ಟಿ ಮಾತನಾಡಿ,   ಸಶಕ್ತ ಭಾರತವನ್ನು  ಸಶಕ್ತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಿರ್ಮಾಣವಾಗಬೇಕೆಂದು ನಮ್ಮ ಕುಲಪತಿಗಳಾದ ಡಾ ಭಗವಾನ್ ಬಿ.ಸಿಯವರ ಕನಸು.   ಆ ನೆಲೆಯಲ್ಲಿ ಈ  ಕ್ರೀಡಾಕೂಟವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ದೀಪನಕ್ಕೆ ನೀಡುವ ಪ್ರೋತ್ಸಾಹವನ್ನು ಸಾಕ್ಷೀಕರಿಸುತ್ತದೆ.


 ಕ್ರೀಡೆ ಎನ್ನುವುದು ಕೇವಲ ಶಕ್ತಿ ಅಥವಾ ಕೌಶಲ್ಯದ ಸ್ಪರ್ಧೆಯಲ್ಲ.  ಅದು ಮೌಲ್ಯಗಳ ಶಿಕ್ಷಣವಾಗಿದೆ. ಕ್ರೀಡೆ ವಿದ್ಯಾರ್ಥಿಗಳಲ್ಲಿ ಸೋಲು-ಗೆಲುವಿನ ನಡುವೆಯೂ ನಿಲ್ಲುವ ಸ್ಥೈರ್ಯ ಕಲಿಸುತ್ತದೆ. ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡುವ ಮಹತ್ವವು ಅತ್ಯಂತ ಸೂಕ್ತವೂ, ಅಗತ್ಯವೂ ಆಗಿದೆ. ಇವು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಮತ್ತು ಹೊಣೆಗಾರಿಕೆಯಂತಹ ಗುಣಗಳನ್ನು ಬೆಳೆಸುತ್ತದೆ.
ಕರ್ನಾಟಕ ಕೌನ್ಸಿಲ್ ಫಾರ್ ಅಲೈಡ್ ಮತ್ತು ಹೆಲ್ತ್ಕೇರ್ ಪ್ರೊಫೆಶನ್ಸ್ನ ಅಧ್ಯಕ್ಷ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಯು. ಟಿ. ಇಫ್ತಿಖಾರ್ ಅಲಿ ಕರ‍್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಕರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಎ ಕೋಟ್ಯಾನ್,  ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ.   ಇಲ್ಲಿ ಸ್ಪರ್ಧೆ, ಪ್ರಯತ್ನ ಮತ್ತು ಕಲಿಕೆ ಮುಖ್ಯ.

 ಗೆಲುವು ನಮ್ಮಲ್ಲಿ ಆತ್ಮವಿಶ್ವಾಸ, ಖುಷಿ ಮತ್ತು ಮುಂದುವರಿಯುವ ಉತ್ಸಾಹವನ್ನು ಮೂಡಿಸಿದರೆ,  ಸೋಲು ಅದೇ ಮಟ್ಟದಲ್ಲಿ ನಮಗೆ ಮಹತ್ವದ ಪಾಠಗಳನ್ನು ಕಲಿಸುತ್ತದೆ. ಗೆಲುವು ನಮ್ಮ ಸಾಮರ್ಥ್ಯವನ್ನು ದೃಢಪಡಿಸಿದರೆ, ಸೋಲು ನಮ್ಮ ಸಾಮರ್ಥ್ಯವನ್ನು ಹುಡುಕುವಂತೆ ಮಾಡುತ್ತದೆ.  ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಎರಡೂ ನಮಗೆ ಸಹಕಾರಿ ಎಂದರು.

Category
ಕರಾವಳಿ ತರಂಗಿಣಿ