ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಹಾಗೂ ವಿಶ್ವವಿದ್ಯಾನಿಲಯದ ಸಂವರ್ಧನೆಗಾಗಿ ವಿಶೇಷ ನಿಯೋಗದ ರಚನೆಯಾಗಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ ಆಗ್ರಹಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಒಂದೊಮ್ಮೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯವು ಪ್ರಮುಖ ಸ್ಥಾನ ಹೊಂದಿತ್ತು. ಆದರೆ ಇಂದಿನ ವಿಶ್ವವಿದ್ಯಾನಿಲಯದ ಸ್ಥಿತಿ ಕಳವಳಕಾರಿ ಆಗಿದೆ . ಮಾನವಿಕ ಶಾಸ್ತ್ರಗಳಾದ ಸಮಾಜಶಾಸ್ತ್ರ, ತುಳು, ಕೊಂಕಣಿ, ಇತಿಹಾಸ ಮತ್ತು ಪುರಾತತ್ವದಂತಹ ಜನಪ್ರಿಯ ವಿಭಾಗಗಳನ್ನೇ ಮುಚ್ಚಲಾಗಿದೆ. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, 2024-25ನೇ ಸಾಲಿನಲ್ಲಿ 1876 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆ 1508ಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶಕ್ಕೆ ಹೆಸರಾಂತ ಪತ್ರಕರ್ತರನ್ನೊದಗಿಸಿದ ವಿಶ್ವವಿದ್ಯಾನಿಲಯದಲ್ವೇ ಇಂದು ಪ್ರಯೋಗಲಯದ ಕೊರತೆಯಿಂದ ಪತ್ರಿಕೋಧ್ಯಮ ವಿಭಾಗವೇ ಕಾರ್ಯನಿರ್ವಹಿಸದೆ ಇರುವುದು ನಮ್ಮ ದೌರ್ಬಗ್ಯ. ವಿಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ರಸಾಯನಿಕ ಸಾಮಗ್ರಿಗಳ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ. ಕೆಲವು ಕಟ್ಟಡಗಳು ಕುಸಿಯುವ ಹಂತಕ್ಕೆ ತಲುಪಿದ್ದು ಈ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಹೇಳಿದರು .
ಮಂಗಳೂರು ವಿಶ್ವವಿದ್ಯಾನಿಲಯವು ರಾಜ್ಯ ಉನ್ನತ ಶಿಕ್ಷಣ ಮಂಡಳಿಗೆ ತಾವು ನಡೆಸಿದ ಭ್ರಷ್ಟಾಚಾರದ ವಿಷಯ ಬಾಯ್ದಿಟ್ಟಿರುವುದು ವಿಶ್ವವಿದ್ಯಾನಿಲಯದ ಮೇಲೆ ವಿದ್ಯಾರ್ಥಿಗಳು ಇಟ್ಟಿದ್ದ ನಂಬಿಕೆಯನ್ನು ಸಂಪೂರ್ಣವಾಗಿ ಮಸುಕಾಗಿಸುವಂತೆ ಮಾಡಿದೆ .ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ (RUSA) ಯೋಜನೆಯಡಿಯಲ್ಲಿ 2013 ರಿಂದ 2017ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯವು 20 ಕೋಟಿಯಷ್ಟು ಅನುದಾನ ಪಡೆದಿತ್ತು. ಇದರಲ್ಲಿ 7 ಕೋಟಿಯನ್ನು ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದರೂ, ಅಲ್ಲಿ ಯಾವುದೇ ಹಾಸ್ಟೆಲ್ ನಿರ್ಮಾಣವಾಗದೇ ಹಣ ಮಾತ್ರ ಅಧಿಕಾರಿಗಳ ಕೈಸೇರಿದ್ದು ಬಹಿರಂಗವಾಗಿದೆ ಎಂದರು.
ಈ ಹಿನ್ನೆಲೆ ಪರಿಗಣಿಸಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಎಲ್ಲಾ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಲು ಸರ್ಕಾರ ತಕ್ಷಣ ವಿಶೇಷ ಸಮಿತಿ/ನಿಯೋಗವನ್ನು ರಚನೆಗೆ ಅವರು ಆಗ್ರಹಿಸಿದರು .ಅದೇ ರೀತಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂವರ್ಧನ ಮತ್ತು ಸರಿಯಾಗಿರುವ ಸ್ಥಿತಿಗತಿ ಕುರಿತು ಚರ್ಚಿಸಲು, 'ಮಂಗಳೂರು ವಿವಿ ಉಳಿಸಿ' ವಿದ್ಯಾರ್ಥಿ ಆಂದೋಲನದ ಭಾಗವಾಗಿ, ಡಿಸೆಂಬರ್ ಮೊದಲ ವಾರದಲ್ಲಿ ಶಿಕ್ಷಣ ತಜ್ಞರೊಂದಿಗೆ ದುಂಡುಮೇಜಿನ ಸಭೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ನಿಕಟ ಪೂರ್ವ ಸದಸ್ಯರಾದ ರವಿಚಂದ್ರ, ರಮೇಶ್ ಕೆ , ಸಂಘಟನೆಯ ಸದಸ್ಯರಾದ ಶ್ರೀಜಿತ್ ರೈ, ಶ್ರೀ ಲಕ್ಷ್ಮೀ ಉಪಸ್ಥಿತರಿದ್ದರು