ಮಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ರಾಜ್ಯ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ಪದವೀಧರರು ನಾಗರಿಕ ಸೇವೆಗಳಾದ ಐಎಎಸ್ ಅಥವಾ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಭಾರತದ / ಕರ್ನಾಟಕದ ಆಡಳಿತಾತ್ಮಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ ‘ಚಾಣಕ್ಯ ಆಡಳಿತ ತರಬೇತಿ ಯೋಜನೆ’ಯನ್ನು ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಐಎಎಸ್ ಅಥವಾ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಪಡೆಯುವ ಸಂಬಂಧ 2025-26ನೇ ಸಾಲಿನಲ್ಲಿ ಪ್ರವೇಶಾತಿ ಪಡೆದು ಪಾವತಿಸಲಾದ ತರಬೇತಿ ಶುಲ್ಕದ ಮೊತ್ತದಲ್ಲಿ ಗರಿಷ್ಠ ರೂ.1 ಲಕ್ಷಗಳಿಗೆ ಮಿತಿಗೊಳಿಸಿ ಡಿಬಿಟಿ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗುತ್ತದೆ.
ಅರ್ಹತೆಗಳು: ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ (ಇWS ಪ್ರಮಾಣ ಪತ್ರ) ಹೊಂದಿರಬೇಕು. ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯೊಂದಿಗೆ ಸೀಡಿಂಗ್ ಮಾಡಿರಬೇಕು. ಕನಿಷ್ಠ 21 ರಿಂದ ಗರಿಷ್ಠ 35 ವರ್ಷದವರಾಗಿರಬೇಕು. ಮಹಿಳಾ ಅರ್ಜಿದಾರರಿಗೆ ಶೇ.33% (ವಿಧವೆಯವರಿಗೆ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ) ಹಾಗೂ ವಿಶೇಷ ಚೇತನ / ಅಂಧರಿಗೆ ಶೇ.5 ರಷ್ಟು ಮೀಸಲಾತಿ ನಿಗಧಿಪಡಿಸಿದೆ. ಒಂದು ವೇಳೆ ವಿಶೇಷ ಚೇತನ / ಅಂಧ / ಮಹಿಳಾ ಅರ್ಜಿಗಳು ಇಲ್ಲದೇ ಇದ್ದಲ್ಲಿ, ಇತರೆ ಅರ್ಹ ಬ್ರಾಹ್ಮಣ ಅರ್ಜಿದಾರರಿಗೆ ಅವಕಾಶ ಕಲ್ಪಿಸಲಾಗುತ್ತದೆ. ದಿವ್ಯಾಂಗ ಅಭ್ಯರ್ಥಿಗಳು ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ನಿಗಧಿಪಡಿಸಲಾದ ನಮೂನೆಯಲ್ಲಿ ದಿವ್ಯಾಂಗ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ತರಬೇತಿ ಶುಲ್ಕ ಮರುಪಾವತಿಗೆ ಅವಕಾಶವಿರುತ್ತದೆ. ಯೋಜನೆಯಡಿ 100 ವಿದ್ಯಾರ್ಥಿಗಳಿಗೆ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ಒಂದು ವೇಳೆ 100 ಕ್ಕೂ ಹೆಚ್ಚಿನ ಅರ್ಜಿ ಸ್ವೀಕೃತವಾದಲ್ಲಿ, ಪ್ರವೇಶ ಪರೀಕ್ಷೆಯನ್ನು ನಡೆಸಿ ಫಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 15.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ: 8029605888 / 8762249230 ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.