image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಖಾಸಗಿ ಬಸ್‌ಗಳು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು : ಉಡುಪಿ ಡಿ ಸಿ ಆದೇಶ!

ಖಾಸಗಿ ಬಸ್‌ಗಳು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು : ಉಡುಪಿ ಡಿ ಸಿ ಆದೇಶ!

ಉಡುಪಿ : ಖಾಸಗಿ ಬಸ್‌ಗಳು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಬಾಗಿಲುಗಳನ್ನು ಅಳವಡಿಸಿ ಕಡ್ಡಾಯವಾಗಿ ಬಾಗಿಲು ಹಾಕಬೇಕು. ಹಿರಿಯನಾಗರಿಕರು, ಅಂಗವಿಕಲರು ಹಾಗೂ ಮಹಿಳೆಯರ ಸೀಟುಗಳಲ್ಲಿ ಬೇರೆಯವರಿಗೆ ಅವಕಾಶ ನೀಡದೆ ನಿಯಮ ಪಾಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಡೋರ್ ಇಲ್ಲ. ಇದ್ದರೂ ಕೆಲವು ಬಸ್‌ಗಳಲ್ಲಿ ಡೋರ್ ಹಾಕುವುದಿಲ್ಲ ಎಂದು ಸಾರ್ವಜನಿಕರು ಸಭೆಯಲ್ಲಿ ದೂರಿದರು. ಪಡುಕೋಣೆ ಮಾರ್ಗದಲ್ಲಿ ಮಧ್ಯಾಹ್ನ ವೇಳೆ ಬಸ್ ಇಲ್ಲ. ಇದರಿಂದ ಒಂದೂವರೆ ಕಿ.ಮೀ. ದೂರ ನಡೆದುಕೊಂಡು ಹೋಗಬೇಕಾಗುತ್ತದೆ. ಪ್ರತಿದಿನ ರಿಕ್ಷಾಕ್ಕೆ ಹಣ ನೀಡಲು ನಮ್ಮಿಂದ ಅಸಾಧ್ಯ. ಆದುದರಿಂದ ಈ ಮಾರ್ಗದಲ್ಲಿ ಸರಕಾರಿ ಬಸ್ ಆರಂಭಿಸಬೇಕೆಂದು ವಿದ್ಯಾರ್ಥಿನಿಯೊಬ್ಬಳು ಮನವಿ ಮಾಡಿದರು. ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೊಲ್ಲೂರಿಗೆ ಯಾವುದೇ ಸರಕಾರಿ ಬಸ್ ವ್ಯವಸ್ಥೆ ಇಲ್ಲ ಎಂದು ಸಾರ್ವಜನಿಕರು ದೂರಿದರು. ಈಗ ಇರುವ ಕೊಲ್ಲೂರು- ಬೆಂಗಳೂರು ಮಾರ್ಗದಲ್ಲಿ ಓಡಾಡುತ್ತಿರುವ ರಾಜಹಂಸ ಬಸ್ ಬದಲು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮರವಂತೆ ಬಸ್ ನಿಲ್ದಾಣದಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ಗಳು ನಿಲುಗಡೆ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಎಲ್ಲ ಬಸ್ ನಿಲ್ದಾಣಗಳಲ್ಲಿಯೂ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಕಡ್ಡಾಯವಾಗಿ ನಿಲ್ಲಿಸಬೇಕು. ನಿಲ್ಲಿಸದ ಬಸ್‌ಗಳ ಬಗ್ಗೆ ದೂರು ಬಂದರೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕುಂದಾಪುರ- ನೂಜಾಡಿ ಮಾರ್ಗದಲ್ಲಿ ಬಸ್ ಓಡಾಟ ಮಾಡುತ್ತಿಲ್ಲ. ಕೇವಲ ಮೂರು ಕಿ.ಮೀ. ಮಾತ್ರ ಬಸ್ ಬರುತ್ತದೆ. ಉಳಿದ ಮಾರ್ಗದಲ್ಲಿ ಬಸ್‌ಗಳಿಲ್ಲ. ಈ ಮಾರ್ಗದಲ್ಲಿ ಸರಕಾರಿ ಬಸ್‌ಗಳಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜೀವ ಪಡುಕೋಣೆ ಆಗ್ರಹಿಸಿದರು.

Category
ಕರಾವಳಿ ತರಂಗಿಣಿ