ಮಂಗಳೂರು: ದಾರ್ಶನಿಕ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳು 1912ರ ಫೆ.21ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದರು. ಈ ಐತಿಹಾಸಿಕ, ಅಪೂರ್ವ ದಿನದ ಹಿನ್ನಲೆಯಲ್ಲಿ 2026ರ ಫೆ.21ರಂದು ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅನುಯಾಯಿಗಳಿಂದ ಶ್ರೀ ಗುರು ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಆರ್ ಪದ್ಮರಾಜ್ ತಿಳಿಸಿದರು. ಅವರು ಗೋಕರ್ಣನಾಥೇಶ್ವರ ದೇವಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಬ್ರಹ್ಮಶ್ರೀ ನಾರಾಯಣಗುರು ಹಿಂದುಳಿದ ವರ್ಗಕ್ಕೆ ಬದುಕಿನ ಹೊಸತನದ ಹಾದಿಯನ್ನು ತೋರಿಸಿಕೊಟ್ಟವರು. ಗುರುಗಳ ಕ್ರಾಂತಿಕಾರಿ ನಿರ್ಧಾರದಿಂದ ಇಂದು ಹಿಂದುಳಿದ ವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಇದರ ನೆನಪು ಮಾಡುವುದರೊಂದಿಗೆ ಫೆಬ್ರವರಿಯಲ್ಲಿ ನಡೆಯುವ ಸಮಾವೇಶ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ದೇಶ-ವಿದೇಶದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಶ್ರೀ ನಾರಾಯಣ ಗುರುಗಳು ಸ್ವತಃ ಪ್ರತಿಷ್ಠಾಪಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು, ಅವರ ಆಶಯದಂತೆ ಜಾತಿ ಭೇಧ, ಮತ ದ್ವೇಷ ಏನೂ ಇಲ್ಲದೆ ಸರ್ವರೂ ಸೋದರತ್ವದಿಂದ ಬಾಳುವ ಮಾತೃಕ ಸ್ಥಾನವಾಗಿ ರೂಪುಗೊಂಡಿದೆ. ಪ್ರತಿಯೊಬ್ಬರಿಗೂ ಸಹೋದರತ್ವದಿಂದ ಅರಿವನ್ನು ಮೂಡಿಸುವ ಧಾರ್ಮಿಕ ಪ್ರತಿಯೊಬ್ಬರೊಳಗಿನ ಕೇಂದ್ರವಾಗಿರುವ ಈ ಕ್ಷೇತ್ರದ ಆಶಯವನ್ನು ಮುಂದುವರಿಸುತ್ತಾ, ಈ ಮೂಲಕ ಜನ ಸಾಮಾನ್ಯರು ಮಾನಸಿಕ, ಧಾರ್ಮಿಕ, ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಶಕ್ತಿ ಸಂಪನ್ನರಾದರೆ ಅವರ ಜೀವನ ಮೌಲ್ಯಯುತವಾಗುವುದು ಎನ್ನುವ ಸತ್ಯವನ್ನು ಮನಗಂಡು ದೇವಸ್ಥಾನದ ಮೂಲಕ ಸಮಾಜಕ್ಕೆ ಹೊಸ ಚೇತನ ಮತ್ತು ಆಯಾಮಗಳನ್ನು ಒದಗಿಸಲು ಶ್ರೀ ನಾರಾಯಣ ಗುರುಗಳ ಅನುಯಾಯಿಗಳ ಸಮಾವೇಶವನ್ನು ಸಂಘಟಿಸಲಾಗುತ್ತಿದೆ. ಸಮಾಜದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ, ಸಂಘಟನೆ, ಗುರುಗಳ ಮೂಲತತ್ವದ ಅನುಷ್ಠಾನದ ಜಾಗೃತಿ ಈ ಕಾರ್ಯಕ್ರಮದ ಹಿಂದಿನ ಆಶಯವಾಗಿದೆ. ಹಿಂದುಳಿದ ವರ್ಗದ ಎಲ್ಲ ಗಣ್ಯರು, ನಾಯಕರು, ಸಂಘಟನೆಗಳು, ಪ್ರಮುಖರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 1ಲಕ್ಷಕ್ಕೂ ಅಧಿಕ ಗುರುಗಳ ಅನುಯಾಯಿಗಳು ಸೇರುವ ನಿರೀಕ್ಷೆಯಿದೆ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಗೆಜ್ಜೆಗಿರಿ ಕ್ಷೇತ್ರ, ಕಟಪಾಡಿ ವಿಶ್ವನಾಥ ದೇವಸ್ಥಾನ, ಕಂಕನಾಡಿ ಗರಡಿ ಕ್ಷೇತ್ರ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ, ಅಖಿಲ ಭಾರತ ಬಿಲ್ಲವರ ಯೂನಿಯನ್, ಗೋಕರ್ಣನಾಥ ಬ್ಯಾಂಕ್, ಭಾರತ್ ಬ್ಯಾಂಕ್, ಗುರು ದೇವ ಬ್ಯಾಂಕ್. ಆತ್ಮಶಕ್ತಿ ಬ್ಯಾಂಕ್, ಮೂರ್ತೆದಾರರ ಸಹಕಾರಿ ಸಂಘ, ಯುವವಾಹಿನಿ, ನಾರಾಯಣ ಗುರು ಯುವವೇದಿಕೆ ಮಂಗಳೂರು, ಯುವವೇದಿಕೆ ಉಡುಪಿ, ನಾರಾಯಣ ಗುರು ವಿಚಾರ ವೇದಿಕೆ. ಬಿರುವೆರ್ ಕುಡ್ಡ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಕೇರಳ ಸೇರಿ ದೇಶ ಮತ್ತು ಮಹಿಳಾ ವಿದೇಶಗಳ ಶ್ರೀ ನಾರಾಯಣ ಗುರು ಸಂಘ, ಬಿಲ್ಲವ ಸಂಘಗಳು, ಬಿಲವತ್ತವನ್ನು ವಹಿಸಲಿದೆ ಎಂದು ಮಾಹಿತಿ ನೀಡಿದರು.