ಬಂಟ್ವಾಳ : ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ) ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಸೋಮವಾರ ನಡೆದ 6ನೇ ವರ್ಷದ 'ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು' ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭಾಗವಹಿಸಿದರು. ಕೆಸರಿಗಿಳಿದ ಡಿಸಿ ಮಕ್ಕಳೊಂದಿಗೆ ಆಟವಾಡಿದರು. ಮಳೆಗಾಗಿ ರಜೆ ನೀಡುವ ಮಕ್ಕಳ ಮೆಚ್ಚಿನ ಜಿಲ್ಲಾಧಿಕಾರಿಯಾಗಿದ್ದ ಇವರು ಈಗ ಕೆಸರಲ್ಲೂ ಆಟವಾಡಿ ಮಕ್ಕಳ ಖುಷಿ ಹೆಚ್ಚಿಸಿದ್ದಾರೆ.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿ, "ದೇಶದ ಬೆನ್ನೆಲುಬಾತ ರೈತ ಸಂತೋಷವಾಗಿದ್ದರೆ ಇಡೀ ಜಗತ್ತೇ ಸಂತಸಪಡುತ್ತದೆ. ಪ್ರತಿಯೊಬ್ಬರಿಗೆ ಆಹಾರ ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು. ಹವಾಮಾನದ ಎಡರು-ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿ ಬೆಳೆದು ಬಂದಿರುವುದು ಗದ್ದೆಗಳಿಂದ" ಎಂದು ಹೇಳಿದರು.
ಕೆಸರು ಗದ್ದೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ವಿವಿಧ ಆಟಗಳಲ್ಲಿ ಗ್ರಾಮಸ್ಥರು ಕೂಡಾ ಭಾಗಿಯಾಗಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ತುಳು ಸಂಸ್ಕೃತಿಯ ಚಾಪೆ ನೇಯುವುದು, ಬುಟ್ಟಿ ನೇಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ನೇಯುವುದು ಹಾಗು ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷತೆ ನಡೆಸಲಾಯಿತು.