ಮಂಗಳೂರು: ಎಸ್‍ಸಿಎಸ್ ಆಸ್ಪತ್ರೆ, ಮಂಗಳೂರು ಇದರ 38 ವರ್ಷಗಳ ಸಂಭ್ರಮಾಚರಣೆ ಮತ್ತು ಫುಜಿಫಿಲ್ಮ್ ಜಪಾನ್‍ನ 128 ಸ್ಲೈಸ್ ಕಾರ್ಡಿಯಕ್ ಸಿಟಿ ಸ್ಕ್ಯಾನ್,ಆಧುನಿಕ ರೇಡಿಯಾಲಜಿ ವಿಭಾಗ ಮತ್ತು ಎನ್‍ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಲೋಕ ಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡುತ್ತ ಎಸ್‍ಸಿಎಸ್ ಆಸ್ಪತ್ರೆ, ಪ್ರಪ್ರಥಮವಾಗಿ ರೋಗದ ಮೂಲವನ್ನು ಪತ್ತೆ ಹಚ್ಚುವ ಯಂತ್ರವನ್ನು ಲೋಕಾರ್ಪಣೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಇದೊಂದು ಉತ್ತಮ ಹೆಜ್ಜೆ ಯಾವುದೇ ರೋಗವನ್ನು ಮೂಲದಿಂದ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಒಂದು ಉತ್ತಮ ಕಾರ್ಯ. ಕೆಲವೊಂದು ಸಂಧರ್ಭದಲ್ಲಿ ಉತ್ತಮ ರೀತಿಯಲ್ಲಿ ರೋಗದ ಮೂಲದ ಪತ್ತೆ ಕಾರ್ಯ ನಡೆಯದೆ ತಪ್ಪಾಗಿ ಚಿಕಿತ್ಸೆ ನಡೆದು ಮುಂದೆ ಸಮಸ್ಯೆ ಆಗುತ್ತದೆ. ಆ ನಿಟ್ಟಿನಲ್ಲಿ ಮಂಗಳೂರು ದೇಶದಲ್ಲಿಯೇ ಒಂದು ಮಾದರಿ ನಗರ ಎಂದು ನಾನು ನಂಬಿದ್ದೇನೆ.
ಮಂಗಳೂರು ಒಂದು ಸಣ್ಣ ನಗರವಾದರೂ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಸಾಮಾನ್ಯವಾದದ್ದು, ಅಂತಹದರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ಖಾಸಗಿ ವೈದ್ಯಕೀಯ ಸಂಸ್ಥೆ ಗಳು ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳು ಮತ್ತು ಡಾಕ್ಟರ್ ಗಳು ಒಂದು ಮಾದರಿಯನ್ನೇ ಸೃಷ್ಟಿಸಿದ್ದಾರೆ. ಹಾಗಾಗಿ ಮಂಗಳೂರು ನಗರ ಮಾದರಿ ನಗರ ಎಂದರೆ ತಪ್ಪಾಗಲಾರದು ಎಂದರು. ಮುಂದೆ ಮಾತನಾಡುತ್ತ ಪ್ರಧಾನ ಮಂತ್ರಿಯವರು ಇತ್ತೀಚಿಗೆ ನಡೆದ 2.0 ಜಿ ಎಸ್ಟಿ ಕಾರ್ಯಕ್ರಮದಲ್ಲಿ 33 ಜೀವ ರಕ್ಷಕ ಔಷಧಿಗಳಿಗೆ ಇದ್ದ ತೆರಿಗೆಯನ್ನು 0% ಮಾಡಿದ್ದಾರೆ ಮತ್ತು ಇತರ ಹಲವು ಔಷಧಿಗಳಿಗೆ 12% ಇದ್ದ ತೆರಿಗೆಯನ್ನು 5% ಮಾಡಿದ್ದಾರೆ. ಇದು ಸಹ ಮೋದಿ ಸರ್ಕಾರದ ಸಾಧನೆ ಎಂದರು. ಇದೆ ಸಂಧರ್ಭದಲ್ಲಿ ಸಂಸದರು ಎಸ್‍ಸಿಎಸ್ ಆಸ್ಪತ್ರೆ ಯ ನೂತನ ವೆಬ್ ಸೈಟನ್ನು ಬಿಡುಗಡೆಗೊಳಿಸಿದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಜೀತಕಾಮಾನಂದ ಸ್ವಾಮೀಜಿ ಮಾತನಾಡಿ ಎಸ್‍ಸಿಎಸ್ ಆಸ್ಪತ್ರೆ ಯಲ್ಲಿ ಸಾರ್ವಜನಿಕರಿಗೆ ಉತ್ತಮವಾಗಿ ಚಿಕಿತ್ಸೆ ದೊರೆಯುತ್ತಿದ್ದು ಸಂಸ್ಥೆಯಲ್ಲಿ ಇರುವ ಸೇವಾ ನಿರತರ ಸೇವೆ ರೋಗಿಗಳಿಗೆ ಅತ್ಯುತ್ತಮ ವಾಗಿದೆ ಎಂದರು ಸ್ವಾಮೀಜಿ ಅವರು ಆಸ್ಪತ್ರೆಯ ಸೇವಾ ತತ್ಪರತೆ ಹಾಗೂ ಆಸ್ಪತ್ರೆಯ ಉತ್ತಮ ಸೇವಾ ತಂಡಗಳನ್ನು ಶ್ಲಾಘಿಸಿದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಎಸ್‍ಸಿಎಸ್ ಆಸ್ಪತ್ರೆ ಸಂಸ್ಥೆ ಹಲವು ವರ್ಷಗಳಿಂದ ಹಲವು ಸಮಾಜಮುಖಿ ಕೆಲಸಗಳಿಗೆ ಸಹಾಯ ನೀಡುತ್ತಿದೆ ಜೊತೆಗೆ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳನ್ನು ಉನ್ನತೀಕರಿಸುವ ಮೂಲಕ ಉನ್ನತ ಮಟ್ಟದಲ್ಲಿ ನವೀಕರಿಸುತ್ತಿದ್ದಾರೆ. ಮಂಗಳೂರಿನಲ್ಲಿ ಹಲವು ಮೆಡಿಕಲ್ ಕಾಲೇಜುಗಳಿದ್ದು, ಮಂಗಳೂರು ನಗರ ಮೆಡಿಕಲ್ ಹಬ್ ಆಗಿರುವ ಕಾರಣ ಮುಂದಿನ ದಿನಗಳಲ್ಲಿ ಬೇರೆ ದೇಶದ ಜನರು ಜಿಲ್ಲೆಗೆ ಬಂದು ಚಿಕಿತ್ಸೆ ಪಡೆದರೆ ಮಂಗಳೂರು ಮೆಡಿಕಲ್ ಟೂರಿಸಂ ಹಬ್ ಆಗುವುದರಲ್ಲಿ ಸಂಶಯ ಇಲ್ಲ ಎಂದರು.
ಡಾ. ಐ.ಜಿ. ಭಟ್, ಹಿರಿಯ ನರರೋಗ ತಜ್ಞರು, ಸಿಟಿ ಆಸ್ಪತ್ರೆಯ ಸಿಎಂಡಿ ಡಾ. ಕೆ. ಭಾಸ್ಕರ್ ಶೆಟ್ಟಿ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರು, ಫುಜಿಫಿಲ್ಮ್ ಸಂಸ್ಥೆಯ ನಾಗರಾಜ್ ಕೆಂಪಯ್ಯ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸುನಿಲ್ ಆಚಾರ್, ಸಾಯಿರಾಂ, ರವಿ ಶಂಕರ್ ಮಿಜಾರ್, ಎಂ ಬಿ ಪುರಾಣಿಕ್, ಇಸ್ಕಾನ್ ಸಂಸ್ಥೆಯ ಸ್ವಾಮೀಜಿಗಳು , ಮತ್ತಿತರ ಗಣ್ಯರು, ವೈದ್ಯಕೀಯ ವೃತ್ತಿಪರರು ಮತ್ತು ಆಸ್ಪತ್ರೆಯ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಸಿಎಸ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಡಾ. ಜೀವರಾಜ್ ಸೋರಕೆಯವರು ವಹಿಸಿದ್ದು ಎಸ್‍ಸಿಎಸ್ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ಚಂದ್ರಶೇಖರ್ ಜೆ. ಸೊರಕೆ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.