ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವುದು ನೂರಕ್ಕೆ ನೂರು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸದ ನಂತರ ಮಾತನಾಡಿದ ಅವರು,
'ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡಿಸುವವರನ್ನು ದಕ್ಷ ಅಧಿಕಾರಿಗಳನ್ನು ಇಲ್ಲಿಗೆ ಕಳಿಸಿ ಕಡಿವಾಣ ಹಾಕಿದ್ದೇವೆ. ಇಲ್ಲಿ ಎತ್ತಿಕಟ್ಟೋರ ಮಕ್ಕಳು ಯಾರೂ ಈ ಜಗಳದಲ್ಲಿ ಇರಲ್ಲ. ಮೇಲ್ಜಾತಿ, ಶ್ರೀಮಂತರ ಮಕ್ಕಳು ಯಾರೂ ಸಾಯಲ್ಲ. ನಾನು ಯಾರ ಮಾತನ್ನೂ ಕೇಳಿಲ್ಲ, ಕಮಿಷನರ್, ಎಸ್ಪಿ ದಕ್ಷರನ್ನ ನೇಮಕ ಮಾಡಿದೆ. ಈಗ ಸುಧಾರಣೆ ಆಗಿಲ್ವಾ?ದಕ್ಷ ಅಧಿಕಾರಿಗಳು ಇದ್ರೆ ಬದಲಾವಣೆ ಸಾಧ್ಯ. ಯಾವತ್ತಿಗೂ ನಾವು ಅಮಾಯಕರ ಮಕ್ಕಳನ್ನ ಸಾಯಿಸೋ ಕೆಲಸ ಮಾಡಬಾರದು. ಬೇರೆ ಧರ್ಮದವರನ್ನ ದ್ವೇಷ ಮಾಡೋ ಕೆಲಸ ಮಾಡಬಾರದು ಎಂದರು. 'ಪ್ರತಿಯೊಬ್ಬ ವ್ಯಕ್ತಿ ಮನುಷ್ಯರಾಗೋಕೆ ಪ್ರಯತ್ನ ಮಾಡಬೇಕು.
ಕೋಮು ಸೌಹಾರ್ದತೆ ಇದ್ದರೆ ರಾಜ್ಯ, ಜಿಲ್ಲೆ ಅಭಿವೃದ್ಧಿಯಾಗುತ್ತೆ. ಅದಕ್ಕಾಗಿ ನಾವು ಕೋಮು ಸೌಹಾರ್ದ ಕಾಪಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೌಹಾರ್ದಕ್ಕೆ ವಿಶೇಷ ಗಮನ ಕೊಡಬೇಕು. ಸುಳ್ಳು ಹೇಳಿದ್ರೆ ಕಾನೂನು ತಂದು ಕೇಸ್ ಹಾಕ್ತೀವಿ. ಪ್ರಿಯಾಂಕ್ ಖರ್ಗೆ ಮತ್ತು ಹೆಚ್.ಕೆ ಪಾಟೀಲ್ ಆ ಕೆಲಸದಲ್ಲಿ ತೊಡಗಿದ್ದಾರೆ' ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಬದುಕಲು ಸ್ವಾರ್ಥ ಹೆಚ್ಚಾಗಿದೆ. ಎಲ್ಲ ವಿಚಾರಗಳಿಗೂ ಜಾತಿ ಜಾತಿ ಎನ್ನುವವರು ಜೀವದ ವಿಚಾರ ಬಂದಾಗ ಮಾತ್ರ ಬೇರಾಗಿ ಬಿಡುತ್ತಾರೆ. ಆಸ್ಪತ್ರೆಯಲ್ಲಿ ಜೀವ ಉಳಿದರೆ ಸಾಕು. ಯಾರ ರಕ್ತವನ್ನಾದರೂ ನೀಡಿ ಎನ್ನುತ್ತಾನೆ. ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ, ರಾಜ್ಯದ ಅಭಿವೃದ್ಧಿಗಾಗಿ ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಹಿಂದೆ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತೇವೆ ಎಂದರು.
ಸಮಾಜದಲ್ಲಿ ಶ್ರೀಮಂತರು, ಬಡವರು, ಮೇಲ್ಜಾತಿ, ಕೆಳ ಜಾತಿ ಎಲ್ಲರೂ ಇದ್ದಾರೆ. ಸಮಾನತೆಯ ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದೇ ಇರೋರಿಗೆ ಸಹಾಯ ಮಾಡಬೇಕು. ಬಸವಣ್ಣ ಕೂಡ ಕಾಯಕ ಮತ್ತು ದಾಸೋಹದ ಬಗ್ಗೆ ಹೇಳಿದ್ದಾರೆ. ನಮ್ಮಲ್ಲಿ ಅಸಮಾನತೆ, ತಾರತಮ್ಯ ಇದೆ, ಇಲ್ಲಿ ಸಮ ಸಮಾಜ ನಿರ್ಮಾಣ ಆಗಬೇಕು. ನಾನು ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸ್ತಾ ಇದ್ದೇನೆ. ಸಂವಿಧಾನ ಅರಿಯದೇ ಇದ್ದರೆ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದು ತಿಳಿಸಿದರು.