ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 31ನೇ ಬಿಜೈ ವಾರ್ಡಿನ ಬಿಜೈ ನ್ಯೂ ರೋಡ್‌ನಲ್ಲಿ 50ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಮತ್ತು ಫುಟ್‌ಪಾತ್ ನಿರ್ಮಾಣಗೊಳ್ಳಲಿದ್ದು ಅದರ ಶಿಲನ್ಯಾಸವು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಶಾಸಕರು, ಬಿಜೈ ಕಾಪಿಕಾಡ್ ನಿಂದ ಆನೆಗುಂಡಿ ಹೋಗುವ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಚರಂಡಿ ಮತ್ತು ಫುಟ್‌ಪಾತ್ ಅಗತ್ಯತೆ ಬಗ್ಗೆ ಸ್ಥಳೀಯರು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಅದಕ್ಕೆ ಪೂರಕವಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆಯಾಗುವಂತೆ ಮಾಡಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲಾ ಅನುದಾನಗಳಿಗೆ ತಡೆ ನೀಡಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು. ನಂತರ ಸಚಿವ ಸತೀಶ್ ಜಾರಕಿಹೊಳಿಯವರನ್ನು ಹಲವಾರು ಬಾರಿ ಭೇಟಿ ಮಾಡಿ ಈ ಕಾಮಗಾರಿಯ ಅಗತ್ಯತೆ ಬಗ್ಗೆ ಮನದಟ್ಟು ಮಾಡಲಾಗಿದ್ದು ಇದೀಗ ಆ ಕಾಮಗಾರಿ ಕಾರ್ಯರೂಪಕ್ಕೆ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಸಂಜಯ್ ಪ್ರಭು, ನಾರಾಯಣ್, ಪ್ರಶಾಂತ್ ಆಳ್ವ, ಜಯಕುಮಾರ್, ಋತ್ವಿಕ್ ಕದ್ರಿ, ಸಂತೋಷ್ ಉಳ್ಳಾಲ್, ಮನೋಜ್, ಜಗದೀಶ್, ವಸಂತ್, ಭರತ್, ದೀಪಿಕಾ, ಮೊದಲಾದವರು ಉಪಸ್ಥಿತರಿದ್ದರು.