ಕಾರವಾರ: ಉದ್ಯಮಿ ಹಾಗೂ ಅವರ ಪತ್ನಿ ಮೇಲೆ ಐವರು ಅಪರಿಚಿತರು ತಲ್ವಾರ್ ಹಾಗೂ ಇತರೆ ಮಾರಕಾಸ್ತ್ರದಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಣಕೋಣದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯಮಿಯಾಗಿರುವ ಹಣಕೋಣ ಗ್ರಾಮದ ವಿನಾಯಕ ಎಂಬವರು ಹತ್ಯೆಯಾಗಿದ್ದು, ಇವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾತೇರಿ ಜಾತ್ರೆಗೆ ಉದ್ಯಮಿ ದಂಪತಿ ಬಂದಿದ್ದು, ಮರಳಿ ಪುಣೆಗೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಅಪರಿಚಿತರು ಮನೆಗೆ ನುಗ್ಗಿ, ಅಡುಗೆ ಮನೆಯಲ್ಲಿದ್ದ ವಿನಾಯಕ ಅವರಿಗೆ ಮನಬಂದಂತೆ ಚಾಕು ಹಾಗೂ ತಲ್ವಾರ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹೆಂಡತಿ ಮೇಲೂ ದಾಳಿ ಮಾಡಿದ್ದು, ಅವರ ತಲೆ, ಕೈ ಸೇರಿದಂತೆ ಹಲವೆಡೆ ಗಂಭೀರ ಗಾಯಗಳಾಗಿವೆ.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯಂಗಳದಲ್ಲಿ ಚಾಕು ಹಾಗೂ ರಾಡ್ ಸಿಕ್ಕಿದ್ದು, ಪೊಲೀಸ್ ತನಿಖೆಯ ಬಳಿಕವೇ ನಿಜಾಂಶ ಹೊರಬರಬೇಕಿದೆ.