image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೃತಾನಂದಮಯಿ ಮಠದ ಸಮಾಜಮುಖಿ ಸೇವೆ ಅನುಕರಣೀಯ-ವೇದವ್ಯಾಸ ಕಾಮತ್

ಅಮೃತಾನಂದಮಯಿ ಮಠದ ಸಮಾಜಮುಖಿ ಸೇವೆ ಅನುಕರಣೀಯ-ವೇದವ್ಯಾಸ ಕಾಮತ್

ಮಂಗಳೂರು: ಸೇವೆಯನ್ನೇ ಪರಮ ಗುರಿಯನ್ನಾಗಿಸಿಕೊಂಡಿರುವ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠವು ತನ್ನ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಅನೇಕ ಉಚಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು 400 ಕ್ಕೂ ಅಧಿಕ ಮಕ್ಕಳ ಹೃದಯ ತಪಾಸಣೆ ಮಾಡಿ ಅಗತ್ಯವುಳ್ಳವರಿಗೆ ಸಂಪೂರ್ಣ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದು ಹಾಗೂ ಇಲ್ಲಿ ವಿತರಣೆ ಮಾಡುತ್ತಿರುವ ವಸ್ತ್ರದಾನ ಮುಂತಾದವುಗಳು ಒಂದು ಮಾದರಿ ಉಪಕ್ರಮವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಮಾತಾ ಅಮೃತಾನಂದಮಯಿ ದೇವಿಯವರ 72 ನೆಯ ಜನ್ಮದಿನಾಚರಣೆಯ ಪ್ರಯುಕ್ತ ಮಠದಲ್ಲಿ ಜರುಗಿದ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅದಕ್ಕೆ ಮುನ್ನ ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರಿಂದ ಶ್ರೀ ಗುರು ಪಾದುಕಾ ಪೂಜೆ ,ಭಜನೆ ಮತ್ತು ಧ್ಯಾನ ಕಾರ್ಯಕ್ರಮ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಅವರು ಆಶೀರ್ವಚನವಿತ್ತು ಕಳೆದ 25 ವರ್ಷಗಳಿಂದ ಮಠವು ಧಾರ್ಮಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಪ್ರಗತಿಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದರು. ಈ ಸಂದರ್ಭದಲ್ಲಿ ಅರ್ಹಫಲಾನುಭವಿ ಮಹಿಳೆಯರಿಗೆ ಸೀರೆಯನ್ನು ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಮೃತ ಯೂನಿವರ್ಸಿಟಿ ಕೊಚ್ಚಿಯ ಡೀನ್ ಹಾಗೂ ಡೈರೆಕ್ಟರ್ ಡಾ.ಯು.ಕೃಷ್ಣ ಕುಮಾರ್ ಅವರು ಮಾತಾ ಅಮೃತಾನಂದಮಯಿ ಮಠವು ದೇಶದಲ್ಲೇ ಒಂದು ಮಾದರಿ ಸಂಸ್ಥೆಯಾಗಿದ್ದು ಅಮ್ಮನವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ನಡೆಯುವ ಸಮಾಜಮುಖಿ ಕಾರ್ಯಗಳ ಮೂಲಕ ಇದನ್ನು ಕಾಣಬಹುದಾಗಿದೆ ಎಂದರು.

ವೇದಿಕೆಯಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಡಾ. ಜೀವರಾಜ್ ಸೊರಕೆ ಉಪಸ್ಥಿತರಿದ್ದರು. ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಸ್ವಾಗತಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ ವಂದಿಸಿದರು.ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಡಾ.ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ರವಿ ಅಲೆವೂರಾಯ ಮತ್ತು ತಂಡದವರಿಂದ "ಅಮೃತಮಯಿ ಮಹಾತ್ಮೆ" ಎಂಬ ಯಕ್ಷಗಾನ ಬಯಲಾಟ ಜರುಗಿತು.ಆನಂತರ ತಂತ್ರರತ್ನ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಶ್ರೀ ಚಕ್ರಪೂಜೆ ನೆರವೇರಿತು.

Category
ಕರಾವಳಿ ತರಂಗಿಣಿ