ಸುಬ್ರಹ್ಮಣ್ಯ: ದಸರಾ ರಜೆ, ಎರಡನೇ ಶನಿವಾರ ಹಾಗೂ ವಾರಾಂತ್ಯ ರಜೆ ಹಿನ್ನಲೆಯಲ್ಲಿ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿದರು. ದೂರ ದೂರದ ಊರುಗಳಿಂದ ಕುಕ್ಕೆಗೆ ಆಗಮಿಸಿದ ಸಹಸ್ರಾರು ಭಕ್ತರು ಶ್ರೀ ದೇವರ ದರ್ಶನ ಪಡೆದು ಸೇವೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಅಧಿಕ ಭಕ್ತರ ಆಗಮನ ಹಿನ್ನಲೆಯಲ್ಲಿ ಷಣ್ಮುಖ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ, ಪೇಟೆಯಲ್ಲಿ ಭಕ್ತರ ದಟ್ಟಣೆ ಕಂಡುಬಂದಿತ್ತು. ಪೇಟೆಯ ಪಾರ್ಕಿಂಗ್ ಸ್ಥಳಗಳಲ್ಲೂ ವಾಹನಗಳು ತುಂಬಿ ತುಳುಕಿದವು, ಪೇಟೆಯಲ್ಲೂ ವಾಹನ ದಟ್ಟಣೆ ಅಧಿಕವಾಗಿತ್ತು. ಮಂಗಳೂರಿನ ಮಂಗಳಾದೇವಿ, ಕಟೀಲು, ಪೊಳಲಿ, ಬಪ್ಪನಾಡು, ಮಂದಾರ್ತಿ, ಕೊಲ್ಲೂರು ಸಹಿತ ಕರಾವಳಿಯ ಇತರ ಪ್ರಮುಖ ದೇಗುಲಗಳಲ್ಲಿ ಕೂಡ ಜನಸಂದಣಿ ಎಂದಿಗಿಂತ ಹೆಚ್ಚು ಇತ್ತು.
ಹಬ್ಬ ಹರಿದಿನಗಳು ಆರಂಭವಾಗುತ್ತಿದ್ದಂತೆ ರಜಾದಿನಗಳಲ್ಲಿ ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಮತ್ತು ಬೀಚ್‌ಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ಗಳಲ್ಲಿ ರವಿವಾರ ಸಂಜೆ ಹೆಚ್ಚಿನ ಜನಸಂದಣಿ ಇತ್ತು. ರವಿವಾರ ದಿನವಿಡೀ ಉತ್ತಮ ಬಿಸಿಲು ಇದ್ದುದರಿಂದ ಸಂಜೆಯ ವೇಳೆ ಹೆಚ್ಚಿನ ಜನ ಬೀಚ್‌ನತ್ತ ಹೊರಟರು. ಪಣಂಬೂರಿನಲ್ಲಿ ಜೆಟ್ ಸ್ಕೈ, ಸೈಕ್ಲಿಂಗ್, ದೋಣಿ ಪ್ರವಾಸ, ಫಿಶ್ ತೆರಪಿ, 360 ಡಿಗ್ರಿ ಸೆಲ್ಫಿ ಸ್ಟಿಕ್, ಮರಳಿನಲ್ಲಿ ಸಾಗುವ ನ್ಪೋರ್ಟ್ ಬೈಕ್ ಆಕರ್ಷಣೆಯ ಕೇಂದ್ರವಾಗುತ್ತಿದೆ. ಮುಂದಿನ ವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಆರಂಭವಾಗಲಿರುವುದರಿಂದ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಇಲ್ಲಿನ ವ್ಯಾಪಾರಿಗಳು ಹೊಂದಿದ್ದಾರೆ. ಮಲ್ಪೆ ಮತ್ತು ಕಾಪು ಬೀಚ್‌ಗಳಲ್ಲಿ ಕೂಡ ರವಿವಾರ ಪ್ರವಾಸಿಗರ ದಟ್ಟಣೆ ಕಂಡು ಬಂದಿತ್ತು. ಸಂಜೆಯ ವೇಳೆಯ ಮೋಡಗಳ ನಡುವೆ ರಕ್ತ ವರ್ಣ ವೈಭವದ ಸೂರ್ಯಾಸ್ತದ ಸೊಬಗು ಪ್ರವಾಸಿಗರನ್ನು ಆಕರ್ಷಿಸಿತು.