ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಯವರ ಮನವಿಯ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಂಗಳೂರು ಹಾಗೂ ಪೊಳಲಿಯ ನಡುವೆ ನರ್ಮ್ ಬಸ್ ಓಡಾಟ ಆರಂಭಗೊಂಡಿದ್ದು, ಇದರ ಉದ್ಘಾಟನೆ ಮಂಗಳೂರು ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ಗುರುವಾರ ನೆರವೇರಿತು.
ಶಾಸಕರಾದ ಡಾ. ಭರತ್ ಶೆಟ್ಟಿ ವೈ ಉದ್ಘಾಟಿಸಿ, ಗ್ರಾಮೀಣ ಭಾಗ ವಾಮಂಜೂರು ಬೋಂಡಂತಿಲ ಪೂಳಲಿ ಮಾರ್ಗವಾಗಿ ಸರ್ಕಾರಿ ಬಸ್ ಸೌಲಭ್ಯ ಒದಗಿಸಿಕೊಡುವಂತೆ ಸಾರ್ವಜನಿಕರು ಮನವಿಯನ್ನು ಅರ್ಪಿಸಿದ್ದರು. ಈ ಬಗ್ಗೆ ಸರಕಾರದ ಗಮನ ಸೆಳೆದು ಪತ್ರವನ್ನ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿ ಬಸ್ ಓಡಾಟ ಆರಂಭಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಹೇಳಿದರು. ಹಾಗೆಯೇ ಗ್ರಾಮೀಣ ಭಾಗದ ರಸ್ತೆ ಅಗಲ ಕಿರಿದಾದ ತಿರುವುಗಳನ್ನು ಹೊಂದಿರುವ ಕಾರಣ ಸಣ್ಣ ಬಸ್ಸುಗಳು ಮಾತ್ರ ಓಡಾಟ ನಡೆಸುತ್ತವೆ. ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಬಸ್ ಸಂಚಾರ ಇರುವಂತೆ ಟೈಮಿಂಗ್ಸ್ ನಿಗದಿ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಮಾತನಾಡಿ, ಸ್ಥಳೀಯ ಶಾಸಕರಾದ ಡಾಕ್ಟರ್ ಭಾರತ್ ಶೆಟ್ಟಿ ವೈ ಅವರು ಸರ್ಕಾರಿ ಬಸ್ಸಿನ ಬೇಡಿಕೆಯನ್ನು ಮಂಡಿಸಿ ಸೌಲಭ್ಯ ಜಾರಿಯಾಗುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು. ಸರ್ಕಾರವು ಸ್ಥಳೀಯವಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕೆ ಎಸ್ ಆರ್ ಟಿ ಸಿ ವಿಭಾಗದ ಅಧಿಕಾರಿಗಳು, ಬಸ್ಸ್ ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.