image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಿಟ್ಟೆ ತುಳು ಅಧ್ಯಯನ ಕೇಂದ್ರದಲ್ಲಿ ಅನ್ ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರ

ನಿಟ್ಟೆ ತುಳು ಅಧ್ಯಯನ ಕೇಂದ್ರದಲ್ಲಿ ಅನ್ ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರ

ಮಂಗಳೂರು: ಭಾಷೆ ಮತ್ತು ತಂತ್ರಜ್ಞಾನ ಇಂದಿನ ದಿನಗಳಲ್ಲಿ ಜತೆ ಜತೆಯಾಗಿ ನಡೆಯಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಭಾಷೆಗಳ ಅಭಿವೃದ್ಧಿ ಸಾಧ್ಯವಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಮತ್ತು ಹಳೇ ವಿದ್ಯಾರ್ಥಿ ಸಂಪರ್ಕ ನಿರ್ದೇಶಕ ಪ್ರಸನ್ನ ಕೈಲಾಜೆ ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯದ ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರ ಮತ್ತು ಯುನೈಟೆಡ್ ಕಿಂಗ್ಡಮ್‌ನ ಸ್ವಾನ್ಸಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಅನ್ ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

 ತಂತ್ರಜ್ಞಾನದ ಮೂಲಕ ಭಾಷೆಯ ಬೆಳವಣಿಗೆಗೆ ಬೇಕಾದ ಹಲವು ಆಯಾಮಗಳ ಚರ್ಚೆಗೆ ಅನ್ ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರ ಸೂಕ್ತ ವೇದಿಕೆಯಾಗಿದೆ. ಭಾಷೆಗಳ ಬೆಳವಣಿಗೆಗೆ ಅಗತ್ಯವಿರುವ ಇಂತಹ ಸಂಶೋಧನಾ ಕಾರ್ಯಕ್ರಮಗಳನ್ನು ನಿಟ್ಟೆ ವಿಶ್ವವಿದ್ಯಾಲಯ ನಿರಂತರ ಪ್ರೋತ್ಸಾಹಿಸುತ್ತದೆ ಎಂದರು.

 ಸ್ವಾನ್ಸಿ ವಿಶ್ವವಿದ್ಯಾಲಯದ ಸಂಶೋಧಕರಾದ ಡಾ.ಥಾಮಸ್ ರೈಟ್ ಮೇರ್, ಪ್ರೊ.ಜೆನಿಫರ್ ಪಿಯರ್‌ಸನ್, ಡಾ.ಡ್ಯಾನಿ ಕೆ.ರಾಜು  ಕಾರ್ಯಾಗಾರದ ಬಗ್ಗೆ ಮಾಹಿತಿ ವಿನಿಮಯ ನಡೆಸಿದರು. ಸಂಶೋಧನಾರ್ತಿಗಳು, ಇಂಜಿನಿಯರ್‌ಗಳು, ಪತ್ರಕರ್ತರು, ಶಿಕ್ಷಕರು, ತಂತ್ರಜ್ಞರು ಸೇರಿರುವಂತೆ ವಿವಿಧ ವಯೋಮಾನ, ವಿವಿಧ ವೃತ್ತಿ ಹಾಗೂ ವಿವಿಧ ಅನುಭವದ ಹಿನ್ನೆಲೆಯ 15 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿಜಯಲಕ್ಷ್ಮೀ ಕಟೀಲು ಪ್ರಾರ್ಥಿಸಿದರು. ಜ್ಯೋತಿ ಮಹಾದೇವ್ ಕಾರ್ಯಕ್ರಮ ನಿರೂಪಿಸಿದರು.

 

ತಂತ್ರಜ್ಞಾನದ ಮೂಲಕ ತುಳು ಹಾಗೂ ಕೊರಗ ಭಾಷಾ ಸಂಗ್ರಹ ಈ ಅನ್ ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರದ ಮೂಲ ಉದ್ದೇಶ. ಸಂಶೋಧನಾ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಶತಮಾನ ಮಿಕ್ಕಿದ ಇತಿಹಾಸ ಹೊಂದಿರುವ ಯುನೈಟೆಡ್ ಕಿಂಗ್ಡಮ್‌ನ ಸ್ವಾನ್ಸಿ ವಿಶ್ವವಿದ್ಯಾಲಯದ ಸಂಶೋಧಕರಾದ ಡಾ.ಥಾಮಸ್ ರೈಟ್ ಮೇರ್, ಪ್ರೊ.ಜೆನಿಫರ್ ಪಿಯರ್‌ಸನ್, ಡಾ.ಡ್ಯಾನಿ ಕೆ.ರಾಜು ಅವರನ್ನೊಳಗೊಂಡ ತಂಡ ತುಳು ಭಾಷೆಯ ಶಬ್ದಗಳನ್ನು ಮಾತಿನ ಮೂಲಕ ತಂತ್ರಜ್ಞಾನ ಬಳಸಿ ಸಂಗ್ರಹಿಸುವ ಯೋಜನೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಡಾ.ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮೂಲಕ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆಯ ವಿಸ್ತಾರಕ್ಕೆ ಹಾಗೂ ಉಳಿವಿಗೆ ಈ ಯೋಜನೆ ಮಹತ್ತರ ಕೊಡುಗೆ ಸಲ್ಲಿಸಲಿದೆ.

Category
ಕರಾವಳಿ ತರಂಗಿಣಿ