ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ 1,174 ಕೋಟಿ ರೂ. ವಹಿವಾಟು ನಡೆಸಿದ್ದು, 12.79 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ ತಿಳಿಸಿದರು. ಒಕ್ಕೂಟದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ 751 ಹಾಲು ಸಂಘಗಳ ಮೂಲಕ ಪ್ರತಿದಿನ 3.97 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿದೆ. ಕಳೆದ ಸಾಲಿನಲ್ಲಿ ಇದು 3.42 ಲ.ಲೀಟರ್ ಆಗಿತ್ತು. ಶೇ. 16ರಷ್ಟು ಏರಿಕೆಯಾಗಿರುವುದು ಉತ್ತಮ ಬೆಳವಣಿಗೆ. ಬೇಡಿಕೆ 5.5 ಲ.ಲೀಟರ್ ಆಗಿದ್ದು, ಉಳಿಕೆ ಹಾಲನ್ನು ಹಾಸನ ಡೇರಿಯಿಂದ ಪೂರೈಸಲಾಗುತ್ತಿದೆ. ದ.ಕ., ಉಡುಪಿ ಜಿಲ್ಲೆಗಳಲ್ಲಿ ತಿಂಗಳಿಗೆ ಸರಾಸರಿ 1,000 ಟನ್ ರಸಮೇವು ವಿತರಿಸುವ ಕೆಲಸ ನಡೆದಿದ್ದು, ಹಾಸನ, ಧಾರವಾಡ, ಮೈಸೂರಿನಿಂದ ಅದನ್ನು ತರಲಾಗುತ್ತಿದೆ. ಇದು ಹಾಲಿನ ಉತ್ಪಾದಕತೆ ಹೆಚ್ಚುವುದಕ್ಕೆ ಕಾರಣವಾಗಿದೆ. ಅಲ್ಲದೆ ಹಾಲಿಗೆ ನೀಡುವ ದರವೂ ಏರಿಕೆಯಾಗಿತ್ತು. ಹೈನುಗಾರರಿಗೆ ಉತ್ತೇಜನ ಸಿಕ್ಕಿದಂತಾಗಿದೆ. ಅಲ್ಲದೆ ಈರೋಡ್, ಹೊರ ಜಿಲ್ಲೆಗಳಿಂದ ರಾಸು ಖರೀದಿಸಿ ಹೈನುಗಾರರಿಗೆ ನೀಡುವ ಯೋಜನೆ ಹಮ್ಮಿಕೊಂಡಿದೆ. ಈ ರಾಸುಗಳ ಸಾಗಾಣಿಕೆ ಹಾಗೂ ವಿಮಾ ವೆಚ್ಚವನ್ನು ಒಕ್ಕೂಟವೇ ಭರಿಸುತ್ತಿದೆ ಎಂದರು. ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಒಕ್ಕೂಟಕ್ಕೆ 10.30 ಎಕರೆ ಸರಕಾರಿ ಜಾಗ ಒದಗಿಸಿರುವುದು ನಮ್ಮ ಯೋಜನೆ ವಿಸ್ತರಣೆಗೆ ಅನುಕೂಲವಾಗಿದೆ. ರಾಜ್ಯ ಸರಕಾರದ ಪ್ರೋತ್ಸಾಹಧನ ಜೂನ್‌ವರೆಗೆ ಬಂದಿದ್ದು, ಉಳಿದ ಹಣ ಸಾಮಾನ್ಯವಾಗಿ ಏಕಕಂತಿನಲ್ಲಿ ಬರುತ್ತದೆ. ರೈತ ಕಲ್ಯಾಣ ಟ್ರಸ್ಟ್ 2024-25ನೇ ಸಾಲಿನಲ್ಲಿ ಒಟ್ಟು ರೂ. 2.05 ಕೋಟಿಯಷ್ಟು ಮೊತ್ತವನ್ನು ರೈತರ ಮರಣ, ವೈದ್ಯಕೀಯ ವೆಚ್ಚ, ರಾಸುಗಳ ಮರಣಕ್ಕೆ ಪಾವತಿಸಲಾಗಿದೆ. 2024-25ನೇ ಸಾಲಿನಲ್ಲಿ ಹಸುರು ಹುಲ್ಲುÉ ಅಭಿವೃದ್ಧಿ, ಹುಲ್ಲು ಕತ್ತರಿಸುವ ಯಂತ್ರ ಖರೀದಿ ಸೇರಿದಂತೆ ನಾನಾ ಯೊಜನೆಗಳಿಗೆ ರೂ. 2.60 ಕೋಟಿಗಳನ್ನು ಅನುದಾನದ ರೂಪದಲ್ಲಿ ನೀಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯ ವಿಡಿಯೋಗಾಗಿ ಕ್ಲಿಕ್ ಮಾಡಿ
ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕರಾದ ಸುಚರಿತ ಶೆಟ್ಟಿ ಮಾತನಾಡಿ, ಎ. 1ರಿಂದ ಶೇ. 3.5ಫ್ಯಾಟ್ ಮತ್ತು ಶೇ 8.5 ಎಸ್.ಎನ್.ಎಫ್.ಗೆ ಒಕ್ಕೂಟದಿಂದ ಸಂಘಗಳಿಗೆ 40.30 ರೂ. ಹಾಗೂ ಸಂಘಗಳಿಂದ ಉತ್ಪಾದಕರಿಗೆ 39 ರೂ. ಕನಿಷ್ಠ ಮಾನದಂಡ ನಿಗದಿಪಡಿಸಿದ್ದು, ಪ್ರಸ್ತುತ ಒಕ್ಕೂಟದಲ್ಲಿ ರಾಜ್ಯದಲ್ಲೇ ಅಧಿಕ ಶೇ. 4.4 ಫ್ಯಾಟ್ ಮತ್ತು ಶೇ. 8.5 ಎಸ್.ಎನ್.ಎಫ್.ನ ಹಾಲು ರೈತರಿಂದ ಖರೀದಿಯಾಗುತ್ತಿದ್ದು, ಇದಕ್ಕೆ ಒಕ್ಕೂಟವು ಸಂಘಗಳಿಗೆ 42.06 ರೂ. ಹಾಗೂ ಉತ್ಪಾದಕರಿಗೆ 40.76 ರೂ. ಗಳನ್ನು ಪಾವತಿಸುತ್ತಿದೆ ಎಂದರು. ಕೆಎಂಎಫ್ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷರಾದ ಉದಯ ಎಸ್. ಕೋಟ್ಯಾನ್, ನಿರ್ದೇಶಕರಾದ ಎಸ್.ಬಿ. ಜಯರಾಮ ರೈ, ಕೆ. ಶಿವಮೂರ್ತಿ, ಸುಧಾಕರ ಶೆಟ್ಟಿ, ಎಚ್. ಪ್ರಭಾಕರ್, ಕೆ. ಚಂದ್ರಶೇಖರ ರಾವ್, ಮಮತಾ ಆರ್. ಶೆಟ್ಟಿ, ನಂದರಾಮ್ ರೈ, ಸುಧಾಕರ ರೈ, ಒಕ್ಕೂಟದ ಆಡಳಿತ ನಿರ್ದೇಶಕ ವಿವೇಕ್ ಡಿ., ವ್ಯವಸ್ಥಾಪಕರಾದ ರವಿರಾಜ್ ಉಡುಪ, ಮಧುಸೂದನ್ ಕಾಮತ್ ಉಪಸ್ಥಿತರಿದ್ದರು.