ಧರ್ಮಸ್ಥಳ : ಧರ್ಮಸ್ಥಳದ ಬೆಳವಣಿಗೆಯಿಂದ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಕಣ್ಣೀರಿಟ್ಟಿದ್ದಾರೆ, ವೇದನೆ ಪಡುತ್ತಿದ್ದಾರೆ. ಕೆಲವು ಹೆಣ್ಣು ಮಕ್ಕಳು ಯಾವುದೇ ರೀತಿಯ ಹೋರಾಟ, ಪ್ರತಿಭಟನೆಗೂ ಸಿದ್ದರಿದ್ದಾರೆ. ಆದರೆ, ಅಂತಹ ಹೋರಾಟದ ಅವಶ್ಯಕತೆ ಇಲ್ಲ. ಎಲ್ಲವನ್ನೂ ಮಂಜುನಾಥ ಸ್ವಾಮಿಗೆ ಬಿಟ್ಟಿದ್ದೇವೆ. ನಾನು ಯಾವತ್ತೂ ಸತ್ಯ ಬಿಟ್ಟು ಹೋಗಿಲ್ಲ , ಹೋಗುವುದೂ ಇಲ್ಲ. ಎಲ್ಲರೂ ಶಾಂತತೆಯನ್ನು ಕಾಪಾಡಬೇಕು ಹಾಗೂ ತಾಳ್ಮೆಯಿಂದ ಇರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ . ಡಿ . ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರದ ಭಕ್ತಾಧಿಗಳಲ್ಲಿ ಮನವಿ ಮಾಡಿದ್ದಾರೆ. ಧರ್ಮಸ್ಥಳ ಅಪಪ್ರಚಾರ ಖಂಡಿಸಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರಕ್ಕೆ ಇಂದು ಬಹಳ ವಿಶೇಷವಾದ ಕಳೆ ಬಂದಿದೆ. ಇಷ್ಟೊಂದು ಆಶಯಧಾರಿಗಳು, ಆಶೀರ್ವಚನ ನೀಡುತ್ತಿರುವುದು ತುಂಬಾನೆ ದೊಡ್ಡದು. ಕ್ಷೇತ್ರಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ಬಂದಿರುವುದು ಸಂತೋಷ ನೀಡಿದೆ ಎಂದಿದ್ದಾರೆ.
ಎಸ್‌ಐಟಿ ತನಿಖೆ ನಡೆಯುತ್ತಿರುವ ಕಾರಣ ಹೆಚ್ಚು ಮಾತನಾಡಬಾರದು ಎಂದು ಆದೇಶ ಆಗಿದೆ. ಸತ್ಯಕ್ಕೆ ಎರಡು ಮುಖಗಳಿಲ್ಲ, ಒಂದೇ ಮುಖ ಇರುವುದು. ವ್ಯಕ್ತಿ ಯಾವುದೇ ಧರ್ಮವಾಗಲಿ, ಆ ಧರ್ಮಕ್ಕೆ ಶರಣಾಗಬೇಕು. ಇಲ್ಲವಾದಲ್ಲಿ ಅವರು ಅನುಯಾಯಿಗಳೇ ಅಲ್ಲ. ಮಂಜುನಾಥನ ಆಶೀರ್ವಾದ ಎಲ್ಲರ ಮೇಲೂ ಇರಲಿ. ನಾವು ಮಾಡುವ ಎಲ್ಲಾ ಪ್ರಯತ್ನಗಳಿಗೆ ಸ್ವಾಮಿಯ ಅನುಗ್ರಹ ಇದ್ದೇ ಇರುತ್ತದೆ ಎಂದಿದ್ದಾರೆ.