ಮಂಗಳೂರು : ನೂರಾರು ಶವಗಳ ಹೂತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ದೇವಸ್ಥಾನ ಅದರ ಮುಖ್ಯಸ್ಥರು ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಬರೆದಿರುವ ಮಾನಹಾನಿಕರ ವಿಷಯಗಳನ್ನು ತಕ್ಷಣ ತೆಗೆದುಹಾಕುವಂತೆ ಇಲ್ಲಿನ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. 17 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಸಂಬಂಧಿತ ಅರ್ಜಿಯಲ್ಲಿ ಸುಪ್ರೀಂಕೋರ್ಟ್‌ನ ಹಿಂದಿನ ನಿರ್ದೇಶನಗಳನ್ನು ಅನುಸರಿಸಿ ಈ ಆದೇಶ ನೀಡಲಾಗುತ್ತಿದೆ. ಬುರುಡೆ(ತಲೆಬುರುಡೆ) ಗ್ಯಾಂಗ್ ಎಂದು ಕರೆಯಲ್ಪಡುವವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾದ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಮತ್ತು ಇತರರು ಪ್ರಸಾರ ಮಾಡಿದ ಮಾನಹಾನಿಕರ ಹೇಳಿಕೆಗಳ ವಿರುದ್ಧ ಪರಿಹಾರ ಕೋರಿ ಡಿ. ಹರ್ಷೇಂದ್ರ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ. ವಿಡಿಯೋ, ವಾಟ್ಸ್ಆ್ಯಪ್ ಚಾಟ್‌ಗಳು, ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಮತ್ತು ಫೇಸ್‌ಬುಕ್ ರೀಲ್‌ಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಆರೋಪಗಳು "ಆಧಾರರಹಿತ ಮತ್ತು ಹಾನಿಕಾರಕ" ಎಂದು ತೀರ್ಪು ನೀಡಿದೆ. ಇದು ಮತ್ತಷ್ಟು ಮಾನಹಾನಿಕರ ಚಟುವಟಿಕೆಗಳ ವಿರುದ್ಧ ತಡೆಯಾಜ್ಞೆ ನೀಡಿದೆ ಮತ್ತು ಆಕ್ಷೇಪಾರ್ಹ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ಅಳಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ವೇದಿಕೆಗಳಿಗೆ ನಿರ್ದೇಶಿಸಿದೆ. ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನೇರವಾಗಿ ಹಸ್ತಕ್ಷೇಪ ಮಾಡಲು ನಿರಾಕರಿಸಿದರೂ ಈ ವಿಷಯವನ್ನು ಸ್ವತಂತ್ರವಾಗಿ ನಿರ್ಣಯಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತು. ಐದು ದಿನಗಳ ವಿಚಾರಣೆಯ ನಂತರ, ಸೆಷನ್ಸ್ ನ್ಯಾಯಾಲಯವು ತನ್ನ ಹಿಂದಿನ ತಡೆಯಾಜ್ಞೆ ಮತ್ತೆ ದೃಢಪಡಿಸಿತು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ದುರುಪಯೋಗಕ್ಕೆ ಈ ತೀರ್ಪು ವಿಶಾಲ ಪರಿಣಾಮಗಳನ್ನು ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ತೀರ್ಪು ಪುರಾವೆಗಳಿಲ್ಲದೇ ಮಾನಹಾನಿಯನ್ನು ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಕೀಲ ಎಸ್ ರಾಜಶೇಖರ್ ಹಿಲಿಯಾರು ದೂರುದಾರರ ಪರವಾಗಿ ವಾದ ಮಂಡಿಸಿದರು.