image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ಒಂದಾದ ಜೈನ ಮಠಗಳ ಸ್ವಾಮೀಜಿಗಳು

ಧರ್ಮಸ್ಥಳದಲ್ಲಿ ಒಂದಾದ ಜೈನ ಮಠಗಳ ಸ್ವಾಮೀಜಿಗಳು

ಮಂಗಳೂರು: ಧರ್ಮಸ್ಥಳದಲ್ಲಿ ಇಂದು ಬೆಳಿಗ್ಗೆ ನಡೆದ ಮಹತ್ವದ ಕಾರ್ಯಕ್ರಮದಲ್ಲಿ ನಾಡಿನ ಸಮಸ್ತ ಜೈನ ಮಠಗಳ ಭಟ್ಟಾರಕ ಸ್ವಾಮೀಜಿಗಳು ಒಗ್ಗಟ್ಟಿನಿಂದ ಭಾಗವಹಿಸಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಿದರು. ಧರ್ಮಸ್ಥಳದ ಮಹಾದ್ವಾರದಲ್ಲಿ ಸೇರಿದ್ದ ಜೈನ ಸಮುದಾಯದ ನಾಯಕರು ನಂತರ ಜಾಥಾವಾಗಿ ಮುಂದೆ ಸಾಗಿದರು. ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಧರ್ಮಸ್ಥಳದ ಧಾರ್ಮಿಕ ಪರಂಪರೆಯೊಂದಿಗೆ ನಿಂತಿದ್ದಾರೆಂಬುದನ್ನು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ ಅವರು ಭಟ್ಟಾರಕ ಸ್ವಾಮೀಜಿಗಳ ಆಗಮನವನ್ನು ಮಹತ್ವದ ಬೆಳವಣಿಗೆಯೆಂದು ವರ್ಣಿಸಿದರು. ಇವತ್ತು ಕ್ಷೇತ್ರಕ್ಕೆ ಹೊಸ ಕಳೆ ಬಂದಿದೆ. ಎಲ್ಲಾ ಜೈನ ಸ್ವಾಮಿಗಳು ನಮ್ಮೊಂದಿಗಿದ್ದಾರೆಂಬುದು ನನಗೆ ದೊಡ್ಡ ಧೈರ್ಯ ಪ್ರಸ್ತುತ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಆದ್ದರಿಂದ ಹೆಚ್ಚು ಮಾತನಾಡಬಾರದು ಎಂಬ ಸೂಚನೆ ಇದೆ. ಆದರೆ ಭಕ್ತರಲ್ಲಿ ಅಶಾಂತಿ ಮನೆ ಮಾಡಿದೆ. ಮಹಿಳೆಯರು ಕಣ್ಣೀರಿಟ್ಟು ನೋವು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಆದರೂ ನಾನು ಎಲ್ಲರನ್ನು ಸಂಯಮದಿಂದ ಇರಲು ವಿನಂತಿಸುತ್ತೇನೆ ಎಂದು ತಿಳಿಸಿದರು. ಹೆಗ್ಗಡೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ಸತ್ಯವನ್ನು ಬಿಟ್ಟು ನಾನು ಎಂದಿಗೂ ಹೋಗಿಲ್ಲ, ಹೋಗುವುದಿಲ್ಲ. ಶಾಂತತೆ ಹಾಗೂ ತಾಳ್ಮೆ ಎಲ್ಲರೂ ಕಾಪಾಡಬೇಕು. ಸಂಯಮವೇ ಅತ್ಯಂತ ಶ್ರೇಷ್ಠ ಎಂದು ಹೇಳಿದರು. ಅವರು ಇನ್ನಷ್ಟು ವಿವರಿಸುತ್ತಾ, ವಿವೇಕಾನಂದರು ದಶ ಲಕ್ಷಣಗಳ ಎಲ್ಲಾ ಗುಣಗಳನ್ನು ಪಾಲಿಸಿದರು, ಆದರೆ ಅವರು ಜೈನ ಧರ್ಮದ ಬಗ್ಗೆ ಹೇಳಿಲ್ಲ. ಸತ್ಯ ಒಂದೇ. ಎಲ್ಲರೂ ದಶ ಧರ್ಮಗಳನ್ನು ಪಾಲಿಸಲೇಬೇಕು ಎಂದು ಕರೆ ನೀಡಿದರು. ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಬಂದಿರುವ ಸ್ವಾಮೀಜಿಗಳ ಸಾನ್ನಿಧ್ಯವು ಧರ್ಮಸ್ಥಳದ ಭಕ್ತರಿಗೆ ಮತ್ತಷ್ಟು ಭರವಸೆ ತುಂಬಿದೆ. ಪೂಜ್ಯರು ಬಂದಿರುವುದು ವಿಶ್ವಾಸ ಮಾಡಿದೆ. ತಮಿಳುನಾಡಿನಿಂದ ಸ್ವಾಮೀಜಿಗಳು ಬಂದಿದ್ದಾರೆ. ಅವರ ಸನ್ನೆ ಕೊಟ್ಟರೆ ಸಾಕು ಸಾವಿರಾರು ಜನ ಸೇರುತ್ತಾರೆ. ಎಲ್ಲರಿಗೂ ನನ್ನ ಧನ್ಯವಾದಗಳು. ಸಂಯಮ ಅತ್ಯಂತ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಆಕ್ರಮಣಗಳು ನಡೆಯುತ್ತವೆ ಎಂದರೆ ಅಲ್ಲಿ ಏನೋ ಶ್ರೇಷ್ಟ, ಒಳ್ಳೆಯದೇ ಇದೆ ಎಂಬ ಅರ್ಥ. ಧರ್ಮಸ್ಥಳದ ಮೇಲಿನ ಟೀಕೆಗಳೂ ಆ ಪರಂಪರೆಯ ಶ್ರೇಷ್ಠತೆಯ ಪ್ರತೀಕವೇ ಎಂದು ಹೇಳಿದರು. ಅವರು ಆರೋಪಗಳ ಹಿನ್ನೆಲೆಯನ್ನು ಪ್ರಸ್ತಾಪಿಸಿ ವೀರೇಂದ್ರ ಹೆಗ್ಗಡೆ ಅವರ ಮನಸ್ಸು ಶುದ್ಧವಾಗಿದೆ. ಅವರು ಜೈನರು ಎಂಬ ಕಾರಣಕ್ಕೇ ಷಡ್ಯಂತ್ರ ನಡೆದಿದೆ. ದೇವಾಲಯದ ಅಧಿಕಾರ ಕಸಿಯಲು ಹೋರಾಟ ನಡೆಯುತ್ತಿದೆ. ಹೆಗ್ಗಡೆ ಅವರು ಹಿಂದೂ ಮತ್ತು ಜೈನ ಸಮುದಾಯದ ಸೇತುವೆ. ಈ ಸೇತುವೆಯನ್ನು ಮುರಿಯಲು ಶಡ್ಯಂತ್ರ ನಡೆಯುತ್ತಿದೆ. ಆದರೆ ಹಿಂದೂ ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಘೋಷಿಸಿದರು. ಸ್ವಾಮೀಜಿ ತಮ್ಮ ಭಾವನೆ ಹಂಚಿಕೊಂಡು, ಹೆಗ್ಗಡೆ ಮನೆತನವು ದೈವಗಳಿಗೆ ಅರ್ಪಿತವಾದ ಮನೆತನ. ತಮ್ಮ ಮನೆಯನ್ನೇ ದೇವತೆಗಳಿಗೆ ಅರ್ಪಿಸಿರುವುದು ಇವರ ಕುಟುಂಬದ ಬೃಹತ್ ತ್ಯಾಗ. ಈ ತ್ಯಾಗದ ಪರಂಪರೆಯನ್ನು ಯಾವ ಶಕ್ತಿಯೂ ಮುರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವಾರು ಭಕ್ತರು ಧರ್ಮಸ್ಥಳದ ಗೌರವವನ್ನು ಕಾಪಾಡಲು ತಾವೆಲ್ಲರೂ ಸಜ್ಜಾಗಿದ್ದೇವೆ ಎಂದು ತಿಳಿಸಿದರು. "ನಮಗೆ ನೆಮ್ಮದಿ ಇಲ್ಲ, ಮಹಿಳೆಯರು ನೋವು ಅನುಭವಿಸುತ್ತಿದ್ದಾರೆ. ಆದರೂ ನಾವು ಸತ್ಯದ ಹಾದಿಯಲ್ಲೇ ನಡೆಯುತ್ತೇವೆ," ಎಂಬ ಭಾವನೆ ವ್ಯಕ್ತವಾಯಿತು. ಧರ್ಮಸ್ಥಳದಲ್ಲಿ ನಡೆದ ಈ ಜೈನ ಸಮುದಾಯದ ಬೆಂಬಲ ಸಮಾವೇಶವು ಪ್ರಸ್ತುತ ನಡೆಯುತ್ತಿರುವ ವಿವಾದದ ನಡುವೆ ಮಹತ್ವ ಪಡೆದಿದೆ. ಜೈನ ಮಠಗಳ ಒಗ್ಗಟ್ಟಿನಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೀಡಲಾದ ಬೆಂಬಲ, ಧರ್ಮಸ್ಥಳದ ಧಾರ್ಮಿಕ ಹಾಗೂ ಸಾಮಾಜಿಕ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದೆ.

Category
ಕರಾವಳಿ ತರಂಗಿಣಿ