ಮಂಗಳೂರು: ಧರ್ಮಸ್ಥಳ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಇದೀಗ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಬುರುಡೆ ದೂರುದಾರನನ್ನು ವಿಚಾರಣೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಸೌಜನ್ಯ ತಾಯಿ ಕುಸುಮಾವತಿ ಅವರು ಎಸ್.ಐ.ಟಿ ಅಧಿಕಾರಿಗಳಿಗೆ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿಂಬರಹ ನೀಡಿದ್ದಾರೆ ಎನ್ನಲಾಗಿದೆ.
ಸೌಜನ್ಯ ತಾಯಿ ಕುಸುಮಾವತಿ ಮಾಸ್ಕ್ ಮ್ಯಾನ್ ಚಿನ್ನಯ್ಯನ ವಿರುದ್ಧ ದೂರು ದಾಖಲಿಸಿದ್ದು, ಚಿನ್ನಯ್ಯ ಯೂಟ್ಯೂಬ್ ಚಾನೆಲ್‌ಗೆ ಸೌಜನ್ಯ ಪರವಾಗಿ ಕೆಲವು ಹೇಳಿಕೆ ನೀಡಿದ್ದು, ಇದರ ಆಧಾರದ ಮೇಲೆ ತನಿಖೆ ನಡೆಸಲು ದೂರು ಕೊಟ್ಟಿದ್ದಾರೆ. ಚಿನ್ನಯ್ಯ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ, "ಸೌಜನ್ಯ ಅವರ ಮೃತದೇಹವನ್ನು ಎತ್ತಿಕೊಂಡು ಹೋಗಿರುವುದನ್ನು ನಾನು ನೋಡಿದ್ದೇನೆ" ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯ ಆಧಾರದ ಮೇಲೆ ಕುಸುಮಾವತಿ ಅವರು ಎಸ್‌ಐಟಿ ಎಸ್ಪಿ ಸೈಮನ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಆ ಹೇಳಿಕೆ ಆಧಾರದ ಮೇಲೆ ಚಿನ್ನಯ್ಯನನ್ನು ತೀವ್ರವಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಚಿನ್ನಯ್ಯ, ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯಾಗಿದ್ದು, ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಆತ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, 2012ರಲ್ಲಿ ಸೌಜನ್ಯ ಅವರ ಮೃತದೇಹವನ್ನು ಎತ್ತಿಕೊಂಡು ಹೋಗಿರುವುದನ್ನು ತಾನು ನೋಡಿದ್ದೇನೆ ಎಂದು ಆರೋಪಿಸಿದ್ದ. ಈ ಹೇಳಿಕೆಯು ಸೌಜನ್ಯ ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದ್ದು, ಕುಸುಮಾವತಿ ಅವರು ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸಿ, ಆತನ ಹೇಳಿಕೆಯ ಕುರಿತು ತನಿಖೆ ನಡೆಸುವಂತೆ ಎಸ್‌ಐಟಿಗೆ ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.