image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಂಗ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ-ನಟ, ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್

ರಂಗ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ-ನಟ, ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್

ಮಂಗಳೂರು : ರಂಗಭೂಮಿಯ ಬಗ್ಗೆ ಈಗ ಸಮಾಜದಲ್ಲಿ ಗೌರವದ ಭಾವನೆ ಇದೆ. ಮಕ್ಕಳು ಸೇರಿದಂತೆ ಯುವ ಜನಾಂಗ ನಾಟಕದಲ್ಲಿ ಅಭಿನಯಿಸಲು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ರಂಗಾಸಕ್ತರನ್ನು ಕಲಾವಿದರಾಗಿ ಬೆಳೆಸುವ ನಿಟ್ಟಿನಲ್ಲಿ ರಂಗ ತರಬೇತಿ ಕೇಂದ್ರವೊಂದನ್ನು  ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ನಟ, ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ಮುಂದಿನ ವರ್ಷ ರಂಗ ತರಬೇತಿ ಕೇಂದ್ರ ಕಾರ್ಯಾರಂಭಿಸಲಿದೆ ’ಎಂದರು.ಬಾಲ್ಯದಲ್ಲಿ ಬಡತನವಿತ್ತು. ಶಾಲಾ ದಿನಗಳಲ್ಲೇ ನಾಟಕ ಮತ್ತು ಹಾಡುಗಾರಿಕೆಯಲ್ಲಿ ಆಸಕ್ತಿ ವಹಿಸಿಸಿದೆ. ಜತೆಗೆ ಹಾಸ್ಯ ಪ್ರವೃತ್ತಿ ಇತ್ತು. ಶಾಲಾ ಗುರುಗಳು ಪ್ರೋತ್ಸಾಹ ನೀಡಿದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದದ್ದು ಬದುಕಿಗೆ ಹೊಸ ತಿರುವು ನೀಡಿತು. ನನ್ನೊಳಗಿನ ಕಲಾವಿದ ಬೆಳಕಿಗೆ ಬರಲು ಅವಕಾಶ ದೊರೆಯಿತು. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ತಮಗೆ ಅಭಿರುಚಿ ಇರುವ ಕಲೆಯಲ್ಲಿ ಪರಿಣತಿ ಪಡೆಯಬೇಕು ಎಂದು ಅವರು ಹೇಳಿದರು.

ಬಿ.ವಿ.ಕಿರೋಡಿಯನ್ ಅವರು ನನ್ನ ರಂಗಭೂಮಿಯ ಗುರುಗಳು. ಅವರಿಂದ ಅಭಿನಯದ ತರಬೇತಿ ಪಡೆದೆ. ಬದುಕಿನಲ್ಲಿ ಸಾಕಷ್ಟು ನೋವು ಕಂಡಿದ್ದೇನೆ. ಹಾಗಾಗಿ ಛಲ ಮೂಡಿತು. ನನ್ನದೇ ಆದ ಚಾ ಪರ್ಕ ತಂಡದ ಮೂಲಕ ಶುದ್ಧ ಹಾಸ್ಯದ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸು  ಕಂಡೆ. ತುಳುನಾಡಿನ ಜನರ ಅಭಿಮಾನ ಹಾಗೂ ಆಶೀರ್ವಾದದಿಂದ ಬೆಳೆದೆ.  .ಈಗ ಪ್ರದರ್ಶನವಾಗುತ್ತಿರುವ ‘ಎನ್ನನೇ ಕಥೆ ’60ನೇ ನಾಟಕ  ಎಂದು ಅವರು ಹೇಳಿದರು.

ಶ್ರೀನಿವಾಸ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಶ್ಮಿತಾ.ಎಸ್.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್  ಕ್ಲಬ್  ಅಧ್ಯಕ್ಷ ಪಿ.ಬಿ.ಹರೀಶ್ ರೈ  ಅಧ್ಯಕ್ಷತೆ ವಹಿಸಿದ್ದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ  ಅನ್ನು ಮಂಗಳೂರು , ಪ್ರೆಸ್‌ಕ್ಲಬ್‌ನ ಸ್ಥಾಪಕ  ಅಧ್ಯಕ್ಷ ಆನಂದ ಶೆಟ್ಟಿ, ಮಹಾರಾಷ್ಟ್ರ -ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ಸಂತೋಷ್ ಮೊಂತೆರೊ ಕಾರ್ಯಕ್ರಮ ನಿರೂಪಿಸಿದರು.

ರಂಗ ಏರದ ದ್ರೋಣ

ಶಾಲೆಯಲ್ಲಿ ಹಿಂದಿ ನಾಟಕವೊಂದರಲ್ಲಿ ದ್ರೋಣನ ಪಾತ್ರ ದೊರೆಯಿತು. ಸಾಯಂಕಾಲ 4 ಗಂಟೆಗೆ ಗಡ್ಡ ಕಟ್ಟಿ, ಬಣ್ಣ ಹಚ್ಚಿ ರೆಡಿಯಾಗಿದ್ದೆ. ರಾತ್ರಿ 9 ಗಂಟೆಯಾದರೂ ನಾಟಕ ಆರಂಭವಾಗಲಿಲ್ಲ. ಸಮಯದ ಅಭಾವದಿಂದ ಹಿಂದಿ ನಾಟಕ ರದ್ದು ಎಂದು ಮೈಕ್‌ನಲ್ಲಿ ಘೋಷಿಸಿದರು. ಮೊದಲ ಬಾರಿಗೆ ಬಣ್ಣ ಹಚ್ಚಿದರೂ, ರಂಗ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಗಡ್ಡ ಬಿಚ್ಚಿದಾಗ ಕಣ್ಣಲ್ಲಿ ನೀರು ಬಂದಿತ್ತು ಎಂದು ಕಾಪಿಕಾಡ್ ಮೊದಲ ಅನುಭವವನ್ನು ಹಂಚಿಕೊಂಡರು.

 

Category
ಕರಾವಳಿ ತರಂಗಿಣಿ