ಮಂಗಳೂರು : ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಕಳೆದ 77 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವನ್ನು ಶ್ರೀ ವಿಶ್ವಾವಸು ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿ ತಾ. 27-08-2025ನೇ ಬುಧವಾರದಿಂದ ಭಾದ್ರಪದ ಶುಕ್ಲ ಅಷ್ಟಮಿ ತಾ. 31-08-2025ನೇ ಆದಿತ್ಯವಾರದವರೆಗೆ ಮಂಗಳೂರಿನ ಸಂಘನೀಕೇತನದಲ್ಲಿ ನೇರವೇರಿಸಲು ನಿಶ್ಚಯಿಸಲಾಗಿದೆ.
ಅಪ್ರತಿಮ ಸ್ವಾತಂತ್ರ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಯಾವ ಉದ್ದೇಶವನ್ನು ಇಟ್ಟುಕೊಂಡು ಧಾರ್ಮಿಕ ಜಾಗೃತಿಯ ಮೂಲಕ ರಾಷ್ಟ್ರೀಯ ಚಿಂತನೆಯನ್ನು ಜನರಲ್ಲಿ ಮೂಡಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವನ್ನು ಪ್ರಾರಂಭಿಸಿದ್ದರೋ ಅದೇ ಪ್ರೇರಣೆಯಿಂದ, ಅದೇ ಉದ್ದೇಶದಿಂದ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಗಣೇಶೋತ್ಸವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಸಮಿತಿಯ ಉಪಾಧ್ಯಕ್ಷರಾದ ಎಂ. ಸತೀಶ್ ಪ್ರಭು ಹೇಳಿದರು. ಅವರು ನಗರದ ಸಂಘನಿಕೇತನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,
ತಾ. 27-08-2025ರಂದು ಬೆಳಿಗ್ಗೆ 10.00ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಬೌದ್ಧಿಕ್ ಪ್ರಮುಖರಾದ ಶ್ರೀ ಸುಧೀರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ನಂತರ ಧ್ವಜಾರೋಹಣ, ಗಣಹೋಮ, ವಿಗ್ರಹದ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಸಂಜೆ 5.00ಗಂಟೆಗೆ ರಥಬೀದಿಯ ವೀರವೆಂಕಟೇಶ ಭಜನಾ ಮಂಡಳಿ ಇವರಿಂದ ಹರಿನಾಮ ಸಂಕೀರ್ತನೆ ಅನಂತರ ಸಮಿತಿಯ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ಸ್ಪರ್ಧಾ ವಿಜೇತರಿಗೆ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಹೆಚ್. ಎಸ್. ಶೆಟ್ಟಿ, ಆಡಳಿತ ನಿರ್ದೇಶಕರು, ಮೈಸೂರು ಮರ್ಕಂಟೈಲ್ ಕಂ., ಬೆಂಗಳೂರು ಇವರು ವಹಿಸಲಿರುವರು. ಸಂಜೆ 7.45ಕ್ಕೆ ಮೂಡ ಗಣಪತಿ ಸೇವೆ ಮತ್ತು ರಂಗ ಪೂಜೆ ನಡೆಯಲಿದೆ. ತಾ. 28-08-2025ರಂದು ಬೆಳಿಗ್ಗೆ 8.30ಕ್ಕೆ ಭಂಡಾರಕೇರಿ ಮಠದ ಶ್ರೀ ಶ್ರೀ ಶ್ರೀ ವಿದ್ವೇಶ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ಆಶೀರ್ವಚನ ನೀಡಲಿರುವವರು. ಸಂಜೆ 6.00 ಗಂಟೆಗೆ ಕೇರಳದ ತಿರುವನಂತಪುರದ ಖ್ಯಾತ ಕಲಾವಿದರಾದ ಶ್ರೀ ಕಾವಾಳಂ ಶ್ರೀಕುಮಾರ್ ಇವರಿಂದ 'ಗಾನ ಸುಧಾ' ನಡೆಯಲಿರುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಲಕ್ಷ್ಮೀ ಸಿಲ್ಕ್ ಪ್ರೈ.ಲಿ. ಆಡಳಿತ ನಿರ್ದೇಶಕರಾದ ಶ್ರೀ ಗೋವಿಂದ ಎನ್. ಕಾಮತ್‌ರವರು ವಹಿಸಲಿರುವರು.
ತಾ. 29-08-2025ರಂದು ಸಂಜೆ 6.00ಗಂಟೆಗೆ ಗಾನ ನೃತ್ಯ ಅಕಾಡೆಮಿ ಇವರಿಂದ ಭರತನಾಟ್ಯ-'ಸತ್ಯಮೇವ ಜಯತೆ' ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರ್ ಇಲೆಕ್ಟಿಕಲ್ ಸರ್ವಿಸಸ್‌ನ ಆಡಳಿತ ನಿರ್ದೇಶಕರಾದ ಶ್ರೀ ರಾಜೇಶ್ ಶೆಟ್ಟಿ ಕಟೀಲು ಇವರು ವಹಿಸಲಿರುವರು. ತಾ. 30-08-2025ರಂದು ಬೆಳಿಗ್ಗೆ 5.00ಗಂಟೆಗೆ ಉಷಃಕಾಲ ಪೂಜೆ, ಮಧ್ಯಾಹ್ನ 1.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6.00 ಗಂಟೆಗೆ ಮುಂಬೈಯ ಹೆಸರಾಂತ ಕಲಾವಿದ ಶ್ರೀ ರಾಜಯೋಗ ಧುರಿ ಇವರಿಂದ 'ಭಜನ್ ಸಂಧ್ಯಾ' ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಬ್ಯಾಂಕ್ ಆಫ್ ಬರೋಡದ ಮಹಾಪ್ರಬಂಧಕರಾದ ಶ್ರೀ ರಾಜೇಶ್ ಖನ್ನಾ ಇವರು ವಹಿಸಲಿರುವರು. ರಾತ್ರಿ 9.30ಕ್ಕೆ ಮಂಗಳೂರಿನ ಬಂಗಾಳಿ ಸಮಾಜದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ತಾ. 31-08-2025 ಆದಿತ್ಯವಾರದಂದು ಮಧ್ಯಾಹ್ನ 1.15ಕ್ಕೆ ವಿಸರ್ಜನಾ ಪೂಜೆ, ಗಂಟೆ 3.15ಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಜಯರಾಮ ಕಾಸರಗೋಡು ಇವರಿಂದ ವಾದ್ಯ ಗೋಷ್ಠಿ, ಸಂಜೆ 6.15ಕ್ಕೆ ಶ್ರೀ ವಿಶ್ವೇಶ್ವರನ ಶೋಭಾಯಾತ್ರೆ ಉತ್ಸವ ಸ್ಥಳದಿಂದ ಕೇರಳದ ಪ್ರಸಿದ್ಧ ಚೆಂಡೆ, ಶಂಖ, ಜಾಗಟೆ, ಕುಣಿತ ಭಜನೆ. ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ಹೊರಟು ಮಣ್ಣಗುಡ್ಡ, ನ್ಯೂಚಿತ್ರ ಜಂಕ್ಷನ್, ರಥಬೀದಿಯಾಗಿ ಶ್ರೀ ಮಾಹಾಮಾಯಾ ತೀರ್ಥದಲ್ಲಿ ವಿಸರ್ಜನೆಗೊಳ್ಳಲಿದೆ. ಉತ್ಸವದ ಐದು ದಿನದ ಪರ್ಯಂತ ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದೆ. ಈ ಕಾರ್ಯಕ್ರಮದ ಯಶಸ್ಸಿಯಾಗಿ ಶ್ರೀ ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಉಪಾಧ್ಯಕ್ಷರಾಗಿ ಎಂ. ಸತೀಶ ಪ್ರಭು, ಬಾಲಕೃಷ್ಣ ಕೊಟ್ಟಾರಿ, ಜೆ.ಕೆ.ರಾವ್, ಆನಂದ ಪಾಂಗಾಳ, ಕೆ.ಪಿ. ಟೈಲರ್, ತರುಣ್ ಕೆ. ಥಾಖರ್, ಸ್ಮಿತಾ ಎಂ., ಪ್ರಧಾನ ಕಾರ್ಯದರ್ಶಿಗಳಾಗಿ ಜಿ. ಸುರೇಶ್ ವಿ. ಕಾಮತ್, ಸ್ವಾಮಿ ಪ್ರಸಾದ್ ಕಾರ್ಯದರ್ಶಿಗಳಾಗಿ ಕೆ. ಜೀವನ್‌ರಾಜ್ ಶೆಣೈ, ಅಭಿಷೇಕ್ ಭಂಡಾರಿ, ಯು. ನಂದನ್ ಮಲ್ಯ, ಗಣೇಶ್ ಪ್ರಸಾದ್, ಪೂರ್ಣಿಮಾ ಶೆಣೈ ಕೋಶಾಧಿಕಾರಿಗಳಾಗಿ ಎಸ್. ಆರ್. ಕುಡ್ಡ, ಸಹ ಕೋಶಾಧಿಕಾರಿಯಾಗಿ ಜಯಪ್ರಕಾಶ್ ಮಂಗಳಾದೇವಿ ಇವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಲ್ಲದೇ ಶ್ರೀ ಕೃಷ್ಣಜನ್ಮಾಷ್ಠಮಿ ಉತ್ಸವ, ವಿದ್ಯಾನಿಧಿ ಯೋಜನೆ, ಪೂರ್ವಾಂಚಲದ ವಿದ್ಯಾರ್ಥಿಗಳ ಶಿಕ್ಷಣ, ವಸತಿ, ವೈದ್ಯಕೀಯ ಶಿಬಿರ, ಯೋಗಾಸನ ತರಗತಿಗಳು, ಆರೋಗ್ಯ ಸಮಲೋಚನ ಶಿಬಿರ, ಬಾಲಸಂಸ್ಕಾರ ಕೇಂದ್ರ, ಸಂಸ್ಕೃತ ತರಗತಿ ಮುಂತಾದ ಪ್ರಕಲ್ಪಗಳು ನಡೆಯುತ್ತಿವೆ.
ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಾಮತ್, ಕಾರ್ಯದರ್ಶಿ ನಂದನ್ ಮಲ್ಯ, ಟ್ರಸ್ಟ್‌ನ ಕಾರ್ಯದರ್ಶಿ ಗಜಾನನ ಪೈ ಉಪಸ್ಥಿತರಿದ್ದರು.