ಮಂಗಳೂರು: ನಮ್ಮ ಜಿಲ್ಲೆಯ ಸೌಂಡ್ಸ್ ಮತ್ತು ಲೈಟ್ಸ್ ಓನರ್ಸ್ ಅಸೋಸಿಯೇಷನ್ ಸಂಘದಲ್ಲಿ ಸುಮಾರು 1300 ಕ್ಕಿಂತಲೂ ಅಧಿಕ ಸದಸ್ಯರಿದ್ದು ಎಲ್ಲರು ಈ ಉದ್ಯೋಗವನ್ನೇ ನಂಬಿ ಸ್ವಉದ್ಯೋಗವನ್ನಾಗಿಸಿ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಇವರೊಂದಿಗೆ ಸುಮಾರು 6000 ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಅವರ ಮನೆಗೂ ಈ ಉದ್ಯೋಗವೇ ಆಧಾರ ಸ್ತಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಆದ ಬೆಳವಣಿಗೆಗಳ ಪ್ರಕಾರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮಕ್ಕೆ ಅನುಗುಣವಾಗಿ ಬೇಕಾಗಿರುವ ಧ್ವನಿವರ್ಧಕ ವ್ಯವಸ್ಥೆ ಪೂರೈಸುವಲ್ಲಿ ಸರಕಾರವು ಕಟ್ಟು ನಿಟ್ಟಿನ ಕ್ರಮ ವಹಿಸಿಕೊಂಡಿದ್ದು ಕಾರ್ಯಕ್ರಮದ ಅನುಕೂಲತೆ, ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಅಲ್ಲಿ ಸೇರುವ ಜನಸಂಖ್ಯೆಯ ಲೆಕ್ಕಾಚಾರದಲ್ಲಿ ಧ್ವನಿವರ್ಧಕ ವ್ಯವಸ್ಥೆ ಪೂರೈಸುವುದನ್ನು ಪೊಲೀಸ್ ಇಲಾಖೆಯು ತಡೆಹಿಡಿಯಲಾಗಿದ್ದು ಇದರಿಂದ ನಮಗೆ ಮತ್ತು ಕಾರ್ಯಕ್ರಮ ಆಯೋಜಕರಿಗೆ ಮತ್ತು ಕಲಾವಿದರಿಗೆ ಅನೇಕ ತೊಂದರೆಯುಂಟಾಗಿರುತ್ತದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಧನರಾಜ್ ಶೆಟ್ಟಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಲಾವಿದರಿದ್ದು ಅವರ ಪ್ರತಿಭಾ ಪ್ರದರ್ಶನಕ್ಕೆ ಹಾಗೂ ಕಲಾವೃತ್ತಿಗೆ ಆ ಪ್ರಕಾರ ಧ್ವನಿವರ್ಧಕ ಪೂರೈಸಲು ಅನುಮತಿ ಇಲ್ಲದೆ ಇರುವುದರಿಂದ ಕಲಾವಿದರು ಕಾರ್ಯಕ್ರಮ ನೀಡಲಾಗದೆ ತಮ್ಮ ಆದಾಯಕ್ಕೂ ಪರದಾಡುವಂತಾಗಿದೆ.
ಈ ಎಲ್ಲಾ ವಿಷಯಗಳನ್ನು ಮನಗಂಡು ಇನ್ನು ಮುಂಬರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೇರುವ ಜನಸಂಖ್ಯೆ, ಸ್ಥಳ ಹಾಗೂ ಕಾರ್ಯಕ್ರಮದ ಅವಶ್ಯಕತೆಗೆ ತಕ್ಕಂತೆ ಧ್ವನಿವರ್ಧಕ ಬಳಸಲು ಅವಕಾಶ ನೀಡದೆ ಇದ್ದಲ್ಲಿ ನಾವು ಸಂಸ್ಥೆಯ ಮಾಲಕರಾಗಿ ಹಾಗೂ ಸಂಘದ ಸದಸ್ಯರಾಗಿ ಎಲ್ಲರ ಒಮ್ಮತದ ಅಭಿಪ್ರಾಯದೊಂದಿಗೆ ಮುಂದೆ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಂದರೆ ನಾಳೆ ತಾರೀಕು 21.08.2025 ರಿಂದ 'ಯಾವುದೇ ರೀತಿಯ ಧ್ವನಿವರ್ಧಕವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ನೀಡುವುದಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇವೆ.ಆದುದರಿಂದ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರವು ನಮ್ಮ ಪರಿಸ್ಥಿತಿಯನ್ನು ಮನಗಂಡು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಪರಿಹಾರಕ್ಕೆ ಶ್ರಮಿಸುವಂತೆ ಪತ್ರಿಕಾ ಗೋಷ್ಠಿಯ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷರಾದ ಅಶೋಕ್ ಕುಮಾರ್ ಬಿ, ಪ್ರ.ಕಾರ್ಯದರ್ಶಿ ಮಹೇಶ್ ಬೋಳಾರ್ ಎಲ್.ಎಂ. ಜಿಲ್ಲಾ ಗೌರವಾಧ್ಯಕ್ಷ ರಾಜಶೇಖರ ಶೆಟ್ಟಿ, ಕುಡ್ತಮುಗೇರ್, ಸುದರ್ಶನ್, ನಿಶಿತ್ ಪೂಜಾರಿ, ಬೋಜರಾಜ್ ಮತ್ತು ಬಾಬು ಕೆ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.