image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ್ಯಾ. ನಾಗಮೋಹನದಾಸ ಆಯೋಗದ ವರದಿ ಮಾಮರ್ಶೆಗೆ ರಾಜ್ಯ ಸಚಿವ ಸಂಪುಟ ಉಪ ಸಮಿತಿ ರಚಿಸಿ: ಪರಿಶಿಷ್ಟರ ಮಹಾಒಕ್ಕೂಟ ಒತ್ತಾಯ

ನ್ಯಾ. ನಾಗಮೋಹನದಾಸ ಆಯೋಗದ ವರದಿ ಮಾಮರ್ಶೆಗೆ ರಾಜ್ಯ ಸಚಿವ ಸಂಪುಟ ಉಪ ಸಮಿತಿ ರಚಿಸಿ: ಪರಿಶಿಷ್ಟರ ಮಹಾಒಕ್ಕೂಟ ಒತ್ತಾಯ

ಮಂಗಳೂರು : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿ ನ್ಯಾ ಎಚ್‌.ಎನ್‌. ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವ ವರದಿ ಬಗ್ಗೆ ಪರಾಮರ್ಶೆ ನಡೆಸಲು ರಾಜ್ಯ ಸಚಿವ ಸಂಪುಟ ಉಪ ಸಮಿತಿ ರಚಿಸಬೇಕು ಎಂದು ಪರಿಶಿಷ್ಟರ ಮಹಾಒಕ್ಕೂಟ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಕರ್ನಾಟಕ ರಾಜ್ಯದ 101 ಪರಿಶಿಷ್ಟ ಜಾತಿಗಳ ಜನರ ನಡುವೆ ಒಳ ಮೀಸಲಾತಿ ನೀತಿ ಜಾರಿಗೆ ತರುವ ಉದ್ದೇಶದಿಂದ ರಚನೆಯಾದ ನ್ಯಾ. ನಾಗಮೋಹನದಾಸ್‌ ಆಯೋಗ ಸಲ್ಲಿಸಿರುವ ವರದಿಯ ಬಗ್ಗೆ ರಾಜ್ಯದ ಪರಿಶಿಷ್ಟ ಜಾತಿಗಳ ಜನರು, ಸಂಘಟನೆಗಳ ಅಭಿಪ್ರಾಯ ಹಾಗೂ ಅಹವಾಲುಗಳನ್ನು ಆಲಿಸಿ ಸ್ವೀಕರಿಸಿ ವರದಿಯ ಸಾಧಕ ಬಾಧಕಗಳ ಬಗ್ಗೆ ವಿಸ್ತ್ರತ ಪರಾಮರ್ಶೆ ನಡೆಸಬೇಕು ಎಂದರು. ಇದಕ್ಕಾಗಿ ರಾಜ್ಯ ಸಚಿವ ಸಂಪುಟ ಉಪ ಸಮಿತಿ ರಚಿಸಲು ಆ.16ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟದ ಸಭೆ ನಿರ್ಣಯ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು.

ಪ್ರಸ್ತಾಪಿತ ಒಳಮೀಸಲಾತಿ ನೀತಿಯು ರಾಜ್ಯದ ಶೋಷಿತ - ವಂಚಿತ 101 ಪರಿಶಿಷ್ಟ ಜಾತಿಗಳ ನಡುವೆ ಇರುವ ಅತ್ಯಂತ ದುರ್ಬಲರಿಗೆ ವಿಶೇಷ ಆದ್ಯತೆ ಮೂಲಕ ಶಕ್ತಿ ತುಂಬುವ, ಎಲ್ಲ ರೀತಿಯಲ್ಲಿ ನ್ಯಾಯ ಖಾತರಿ ಮಾಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಇರುವ, ಎಡ - ಬಲ - ಇತ್ಯಾದಿ ನೆಲೆಗಟ್ಟಿನಲ್ಲಿ ತಾರತಮ್ಯ ನೀತಿ ಅನುಸರಿಸದ, ಪರಿಶಿಷ್ಟ ಜಾತಿಗೆ ಸೇರಿಲ್ಲದ ಹಿರಿಯ ಸಚಿವರೊಬ್ಬರ ನೇತೃತ್ವದಲ್ಲಿ, ಪರಿಶಿಷ್ಟ ಜಾತಿಗಳಿಗೆ ಸೇರಿದ ಎಲ್ಲಾ ಸಚಿವರನ್ನು ಒಳಗೊಂಡಂತೆ, ಸಚಿವ ಸಂಪುಟದ ಉಪ ಸಮಿತಿ ರಚಿಸಬೇಕು ಎಂದವರು ಹೇಳಿದರು. ಈ ವರದಿಯ ಕುರಿತು ಸರಕಾರ ಕೈಗೊಳ್ಳುವ ಯಾವುದೇ ನಿರ್ಣಯವು ರಾಜ್ಯದ 27,24,768 ಕುಟುಂಬಗಳಿಗೆ ಸೇರಿದ ಪರಿಶಿಷ್ಟ ಜಾತಿಗಳ 1,07,01,982 ಜನರ ಸರ್ವತೋಮುಖ ಬದುಕಿನ, ಭವಿಷ್ಯದ ಮೇಲೆ ಮಹತ್ವ ಪೂರ್ಣ ಪರಿಣಾಮ ಬೀರುವುದರಿಂದ, ರಾಜ್ಯದ ಮುಖ್ಯ ಮಂತ್ರಿ ಮತ್ತು ಸಚಿವರು ಈ ಕುರಿತು ಯಾವುದೇ ರೀತಿಯಲ್ಲಿ ಅವಸರದ ತೀರ್ಮಾನ ಕೈಗೊಳ್ಳಬಾರದು.

ಈ ಸಚಿವ ಸಂಪುಟದ ಉಪ ಸಮಿತಿ ಈ ವಿಧಾನಸಭಾ ಅಧಿವೇಶನ ಮುಗಿದ ಕೂಡಲೇ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಅಥವಾ ಕನಿಷ್ಠ ರಾಜ್ಯದಲ್ಲಿ ಗುಲ್ಬರ್ಗ, ಬೆಳಗಾವಿ, ಮಂಗಳೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಸಂಬಂಧ ಸಭೆ ನಡೆಸಿ, ಪರಿಶಿಷ್ಟ ಜಾತಿಗಳ ಜನರ/ಸಂಘಟನೆಗಳ ಅಹವಾಲು ಸ್ವೀಕರಿಸಬೇಕು ಮತ್ತು ಈ ಸಂಬಂಧ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸರಕಾರಕ್ಕೆಸೂಕ್ತ ಶಿಫಾರಸ್ಸು ಗಳನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಆಯೋಗಕ್ಕೆ ಜನವರಿ 31ರಂದು ನಾವು ಸಲ್ಲಿಸಿದ್ದ ಮನವಿಯಲ್ಲಿ ರಾಜ್ಯದಲ್ಲಿ ಒಳ ಮೀಸಲಾತಿಗೆ ಹೊಸತಾಗಿ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿದ್ದೆವು. ಆದರೆ, ಆಯೋಗದ ಅಧ್ಯಕ್ಷರು ಮೇ 5 ರಂದು ಸಮೀಕ್ಷೆ ಆರಂಭವಾಗುವ ಮುನ್ನವೇ ಕ್ರೈಸ್ತ ಮತಕ್ಕೆ ಮತಾಂತರ ಆದವರೂ, ಎಸ್‌ಸಿ ಸರ್ಟಿಫಿಕೇಟ್ ಇದ್ದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರ ಹೇಳಿಕೆ ನೀಡಿರುವುದು, ತಮ್ಮ ಜಾತಿಯ ಹೆಸರು ಪರಿಶಿಷ್ಟ ಜಾತಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಆದಿ ದ್ರಾವಿಡ, ಆದಿ ಕರ್ನಾಟಕ ಇತ್ಯಾದಿ ಹೆಸರಿನಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿರುವುದನ್ನು ಸಮರ್ಥಿಸಿರುವುದು, ಧರ್ಮದ ಕಲಂ ಇಲ್ಲದೆ ಸಮೀಕ್ಷೆ ನಡೆಸಿರುವುದು, ಬೇಡ ಜಂಗಮ-ಬುಡ್ಗ ಜಂಗಮ ಹೆಸರಿನಲ್ಲಿ 3,22,049 ಜನರು ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ, 1,44,387 ಎಂದು ಅದನ್ನು ಪರಿಗಣಿಸಿದೆ.

ಹೀಗೇ ಹತ್ತು ಹಲವು ರೀತಿಯಲ್ಲಿ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಯಲ್ಲಿ ಸಂವಿಧಾನದ ಬದ್ಧತೆ ಮತ್ತು ಆಶಯಗಳಿಗೆ ವ್ಯತಿರಿಕ್ತವಾಗಿ, ಜಾತಿ ಜಾತಿಗಳ ನಡುವೆ ವೈಮನಸ್ಸು- ವೈಷಮ್ಯ ಉಂಟಾಗುವಂತೆ ಅವೈಜ್ಞಾನಿಕ ರೀತಿಯಲ್ಲಿ ಜಾತಿಗಳ ವರ್ಗೀಕರಣ ನಡೆಸಿ ಸರಕಾರಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡಿರುವುದರಿಂದ, ಈ ವರದಿ ಬಗ್ಗೆ ವಿಸ್ತ್ರತವಾದ ಪರಾಮರ್ಶೆ ಅಗತ್ಯ ಎಂದವರು ಹೇಳಿದರು.

Category
ಕರಾವಳಿ ತರಂಗಿಣಿ