ಮಂಗಳೂರು: ವಿಶ್ವ ಸ್ತನಪಾನ ಸಪ್ತಾಹದ ಅಂಗವಾಗಿ ಸ್ತನ್ಯಪಾನದ ಮಹತ್ವದ ಕುರಿತು ಕಾರ್ಯಕ್ರಮ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ 175 ವರ್ಷಗಳ ಇತಿಹಾಸ ಇರುವ ಪ್ರತಿಷ್ಠಿತ ಸರಕಾರಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದ ಆರ್‍ಪಿಸಿಸಿಯಲ್ಲಿ ಗುರುವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆರ್‍ಪಿಸಿಸಿ ಮಕ್ಕಳ ತಜ್ಞ ಡಾ.ಕೆ.ಕೃಷ್ಣ ಎದೆ ಹಾಲಿನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮಗು ಹುಟ್ಟಿದ ದಿನದಂದು ಆರು ತಿಂಗಳ ಕಾಲ ಬರೀ ಎದೆ ಹಾಲನ್ನು ನೀಡಬೇಕು. ನಂತರ 6 ತಿಂಗಳಿನಿಂದ 2 ವರ್ಷಗಳವರೆಗೆ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ನೀಡಬೇಕು. ಏಕೆಂದರೆ ಮಗುವಿನ ಶೇಕಡ 90% ರಷ್ಟು ಮೆದುಳಿನ ಬೆಳವಣಿಗೆ ಈ ಎರಡು ವರ್ಷದಲ್ಲಿ ಆಗುತ್ತದೆ. ಆದ್ದರಿಂದ 2 ವರ್ಷಗಳವರೆಗೆ ಎದೆಹಾಲನ್ನು ಕಡ್ಡಾಯವಾಗಿ ನೀಡಬೇಕು. ಎದೆ ಹಾಲಿನಿಂದ ಮಗುವಿಗೆ, ತಾಯಿಗೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಆಗುವ ಉಪಯೋಗಗಳ ಬಗ್ಗೆ ತಿಳಿಸಿದರು.
ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್‍ಎಪಿಸಿಸಿ ಮಕ್ಕಳ ವಿಭಾಗದ ತಜ್ಞ ವೈದ್ಯ ಡಾ. ಮೊಹಮ್ಮದ್ ಅಬ್ದುಲ್ ಬಾಶಿತ್, ಕೆಎಂಸಿ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಸುಚೇತಾ ರಾವ್, ಮಕ್ಕಳ ತಜ್ಞ ಡಾ. ಹ್ಯಾರೀಸ್, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಜನಾರ್ಧನ್ ಶೆಣೈ, ಡಾ. ಸಿಂಚನಾ ಭಟ್ ಮತ್ತು ಆಸ್ಪತ್ರೆಯ ಶುಶ್ರೂಷಕರಾದ ಕುಮುದಾ ಮತ್ತು ಸುಲೋಮಿ ಉಪಸ್ಥಿತರಿದ್ದರು.
ಸರಿತಾ ಸ್ವಾಗತಿಸಿ, ಶುಭ ಕಾರ್ಯಕ್ರಮವನ್ನು ನಿರೂಪಿಸಿದರು. ಗೀತಾ ವಂದಿಸಿ, ಸರೋಜಿನಿ ನಾಯ್ಕ ತಾಯಂದಿರಿಗೆ ಕ್ವಿಝ್ ಕಾರ್ಯಕ್ರಮ ನಡೆಸಿಕೊಟ್ಟರು.