ಮಂಗಳೂರು: 85 ವರ್ಷ ಪ್ರಾಯದವರು 18 ವರ್ಷದ ಯುವಕರನ್ನು ಮತೀಯವಾಗಿ ಪ್ರಚೋದನೆಗೊಳಿಸಿ ಸಂಘರ್ಷಕ್ಕೆ ಕಾರಣವಾಗುವ ಕೃತ್ಯಗಳು ಕೊನೆಯಾಗಬೇಕು. ಎಲ್ಲಾ ವಿಚಾರದಲ್ಲೂ ಮುಂಚೂಣಿಯಲ್ಲಿರುವ ಕರಾವಳಿಯಲ್ಲಿ ಮತೀಯ ವಿಚಾರಕ್ಕೆ ನಡೆಯುವ ಸಂಘರ್ಷಗಳಿಗೆ ಸಂಬಂಧಿಸಿ ಸರಕಾರ ಗಂಭೀರವಾಗಿ ಪರಿಗಣಿಸಿ, ನಮ್ಮ ಬೇಡಿಕೆಗೆ ಪೂರಕವಾಗಿ ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ರಾಜ್ಯ ಸಂಯೋಜಕ ಜಗದೀಶ್ ಅಧಿಕಾರಿ ಕೆ.ಪಿ. ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಯುವಕರು ಇಂತಹ ಮತೀಯ ಸಂಘರ್ಷಗಳ ಕಾರಣಕ್ಕೆ ಜೈಲು ಪಾಲಾಗುವುದನ್ನು ತಡೆಯಬೇಕು. ಇಲ್ಲಿನ ಯುವ ಜನತೆಯನ್ನು ಹಾದಿತಪ್ಪಿಸುತ್ತಿರುವ ಮಾದಕ ದ್ರವ್ಯಗಳಿಂದ ಮುಕ್ತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಮಂಗಳೂರನಿಂದ ಉತ್ತಮ ಸಂದೇಶವನ್ನು ನೀಡುವುದಕ್ಕೆ ಬದ್ಧವಾಗಿ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮಾರಕವಾಗಿರುವ ಕೋಮುವಾದವನ್ನು ನಿರ್ನಾಮ ಮಾಡಲು ಬದ್ಧವಾಗಿರುವುದಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಘೋಷಿಸಿದ್ದು, ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಕೋಮುವಾದದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಲವು ಜೀವಗಳು ಬಲಿಯಾಗಿವೆ. ಮುಂದೆ ಅಂತಹ ಘಟನೆಗಳು ಮರುಕಳಿಸದಿರುವ ನಿಟ್ಟಿನಲ್ಲಿ ಸಮಿತಿಯ ಮುಂಬೈಯಲ್ಲಿರುವ ಎಲ್ಲಾ ಸದಸ್ಯರು ಒಂದಾಗಿದ್ದೇವೆ ಎಂದು ಅವರು ಹೇಳಿದರು.
ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಮಾತನಾಡಿ, ಸಮಿತಿಯನ್ನು ದ.ಕ. ಮತ್ತು ಉಡುಪಿಯ ಉದ್ದಗಲಕ್ಕೂ ವಿಸ್ತರಿಸಲಾಗಿದೆ. ಉಭಯ ಜಿಲ್ಲೆಗಳ ಪ್ರತಿ ತಾಲೂಕಿನಿಂದ ಸಂಪನ್ಮೂಲ ಭರಿತ ಐದು ಮಂದಿಯ ಸದಸ್ಯರನ್ನು ಮಾಡಿ ಇಲ್ಲಿನ ಸುರಕ್ಷತೆ, ಹಾಗೂ ಸೌಹಾರ್ದತೆಯ ದೃಷ್ಟಿಯಿಂದ ಕಾರ್ಯ ನಿರ್ವಹಿಸಲು ಕ್ರಮ ವಹಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಕಾಯದರ್ಶಿ ಸುರೇಂದ್ರ ಮೆಂಡನ್, ಜಿಲ್ಲಾ ಕಾರ್ಯದರ್ಶಿ ಜಿ.ಟಿ. ಆಚಾರ್ಯ, ಉಪ ಕಾರ್ಯಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗ, ವಕ್ತಾರ ದಯಾಸಾಗರ್ ಚೌಟ ಮೊದಲಾದವರು ಉಪಸ್ಥಿತರಿದ್ದರು.