ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) 20 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿ ಆದೇಶಿಸಿತ್ತು. ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ.ಪ್ರಣವ್ ಮೊಹಂತಿ ಅವರ ನೇತೃತ್ವದ ತಂಡದಲ್ಲಿ ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ.
ಇದರೊಂದಿಗೆ ಮಂಗಳೂರು ಡಿಸಿಆರ್‌ಇ ಎಸ್ಪಿ ಸಿ.ಎ.ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿಎಸ್‌ಪಿ, ಎ.ಸಿ ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿಎಸ್‌ಪಿ ಮಂಜುನಾಥ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್, ಸಿಎಸ್‌ಪಿ ಇನ್‌ಸ್ಪೆಕ್ಟರ್ ಇ.ಸಿ ಸಂಪತ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಕುಸುಮಧರ್, ಉತ್ತರ ಕನ್ನಡದ ಶಿರಸಿ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಗೌಡ, ಉಡುಪಿ, ಬೈಂದೂರು ಇನ್‌ಸ್ಪೆಕ್ಟರ್ ಪಿ.ಡಿ ಸವಿತ್ರು ತೇಜ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಕೋಕಿಲ ನಾಯಕ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ವೈಲೆಟ್ ಫೆಮಿನಾ, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಶಿವ ಶಂಕರ್, ಉತ್ತರ ಕನ್ನಡ, ಶಿರಸಿ ಎನ್.ಎಂ. ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಆಂಕೋಲ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಆರ್.ಸುಹಾಸ್, ಉತ್ತರ ಕನ್ನಡ ಮುಂಡಗೋಡು ಸಬ್‌ಇನ್‌ಸ್ಪೆಕ್ಟರ್ ವಿನೋದ್ ಎಸ್.ಕಾಳಪ್ಪನವರ್, ಮಂಗಳೂರು ಮೆಸ್ಕಾಂ ಸಬ್‌ಇನ್‌ಸ್ಪೆಕ್ಟರ್ ಜೆ.ಗುಣಪಾಲ್, ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್‌ಐ ಸುಭಾಷ್ ಕಾಮತ್, ಉಡುಪಿ ಕಾಪು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಹರೀಶ್‌ಬಾಬು, ಉಡುಪಿ ಮಲ್ಪೆ ಸರ್ಕಲ್ ಕಚೇರಿಯ ಹೆಡ್‌ಕಾನ್‌ಸ್ಟೆಬಲ್ ಪ್ರಕಾಶ್, ಉಡುಪಿ ಕುಂದಾಪುರನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ನಾಗರಾಜ್ ಮತ್ತು ಚಿಕ್ಕಮಗಳೂರಿನ ಎಫ್‌ಎಂಎಸ್ ಹೆಡ್‌ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ಎಸ್‌ಐಟಿಗೆ ನಿಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಮಾತನಾಡಿದ್ದ ಗೃಹ ಸಚಿವ ಡಾ.ಪರಮೇಶ್ವರ್, ಎಸ್ಐಟಿ ತಂಡಕ್ಕೆ ಧರ್ಮಸ್ಥಳಕ್ಕೆ ಹೋಗಿ ತನಿಖಾ ಪ್ರಕ್ರಿಯೆ ಶುರು ಮಾಡುವಂತೆ ಸೂಚಿಸಿದ್ದೇವೆ. ಸದ್ಯದಲ್ಲೇ ಎಸ್ಐಟಿ ತಂಡ ಅಲ್ಲಿಗೆ ಹೋಗುತ್ತದೆ. ಧರ್ಮಸ್ಥಳ ಪೊಲೀಸರಿಗೂ ಸೂಚನೆ ನೀಡಿದ್ದೇವೆ. ಎಸ್ಐಟಿ ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯಲ್ಲ. ಹೊರಗೆ ಉಳಿಯೋದಾದರೆ ನಮಗೆ ತಿಳಿಸಲಿ. ಆ ನಂತರ ಅದರ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.