ಬೆಳ್ತಂಗಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೌಜನ್ಯಳಿಗೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಮಾಡಿ ಬಂದಿದ್ದ ಬೆಂಗಳೂರು ಯಲಹಂಕದ ಶರಣಬಸಪ್ಪ ಕಬ್ಬ ಮತ್ತು ತಂಡದವರನ್ನು ಸೋಮವಾರ ಧರ್ಮಸ್ಥಳದ ವ್ಯಾಪಾರಿಗಳು ಹಾಗೂ ಸ್ಥಳೀಯರು ಸೇರಿ ಧರ್ಮಸ್ಥಳದ ಮಹಾದ್ವಾರದ ಬಳಿ ತಡೆದ ಹಿನ್ನಲೆಯಲ್ಲಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿ ಪಾದಯಾತ್ರೆ ಬಂದವರನ್ನು ಸುರಕ್ಷಿತವಾಗಿ ಠಾಣೆಗೆ ಕರೆದೊಯ್ದು ಪರಿಸ್ಥಿತಿ ಶಾಂತಗೊಳಿಸಿದ್ದು ಬಳಿಕ ಪಾದಯಾತ್ರಿಕರು ಹಿಂತಿರುಗಿದರು.
ಸೋಮವಾರ ಮಧ್ಯಾಹ್ನದ ವೇಳೆಗೆ ಪಾದಯಾತ್ರೆಯಲ್ಲಿ ಬಂದ ಶರಣಬಸಪ್ಪ ಕಬ್ಬ ಹಾಗೂ ಇತರ ಹತ್ತು ಮಂದಿ ಧರ್ಮಸ್ಥಳಕ್ಕೆ ಬಂದರು. ಉಜಿರೆಯಿಂದ ಇವರು ಪಾದಯಾತ್ರಯಲ್ಲಿ ಬರುತ್ತಿರುವುದನ್ನೇ ಕಾಯುತ್ತಿದ್ದ ಧರ್ಮಸ್ಥಳದ ಸ್ಥಳೀಯರ ಸುಮಾರು 50ಕ್ಕೂ ಹೆಚ್ಚು ಮಂದಿಯ ತಂಡ ಅವರನ್ನು ಧರ್ಮಸ್ಥಳ ಮುಖ್ಯ ದ್ವಾರದ ಬಳಿ ತಡೆದರು. ಧರ್ಮಸ್ಥಳಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ತಡೆದಾಗ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪಾದಯಾತ್ರೆ ಬಂದವರು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಬಗ್ಗೆ ಆಕ್ಷೇಪಾರ್ಹವಾದ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಿ ಸ್ಥಳೀಯರು ಪಾದಾಯತ್ರೆಯ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾ ಯಿಸಿದರು. ಈ ಸಂದರ್ಭ ಸ್ಥಳೀಯರು ಹಾಗೂ ಪಾದಯಾತ್ರಿಕರ ನಡುವೆ ಮಾತನ ಚಕಮಕಿ ನಡೆಯಿತು. ನೂಕು ನುಗ್ಗಲು ನಡೆಯಿತು. ಸುಮಾರು ಅರ್ಥ ಗಂಟೆಕಾಲ ನಡೆದ ಮಾತಿನ ಚಕಮಕಿ, ಗೊಂದಲಗಳ ಬಳಿಕ ಅಲ್ಲೇ ಇದ್ದ ಪೊಲೀಸರು ಮಧ್ಯಪ್ರವೇಶಿಸಿ ಪಾದಯಾತ್ರಿಕರನ್ನು ಅಲ್ಲಿಂದ ಧರ್ಮಸ್ಥಳ ಠಾಣೆಗೆ ಕರೆ ದೊಯ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಠಾಣೆಯ ಮುಂದೆ ಜಮಾಯಿಸಿ ಪಾದ ಯಾತ್ರಿಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಪೊಲೀಸರ ಸೂಚನೆಯಂತೆ ಅವರು ಠಾಣೆಯಿಂದಲೇ ಹಿಂತಿರುಗಿದ್ದಾರೆ.