image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಕ್ರಮ ಮರಳುಗಾರಿಕೆ ನಿಷೇಧದಿಂದ ಕೆಲಸ ಕಳೆದುಕೊಂಡವರಿಗೆ ಪರಿಹಾರ ನೀಡಲು ಒತ್ತಾಯ

ಅಕ್ರಮ ಮರಳುಗಾರಿಕೆ ನಿಷೇಧದಿಂದ ಕೆಲಸ ಕಳೆದುಕೊಂಡವರಿಗೆ ಪರಿಹಾರ ನೀಡಲು ಒತ್ತಾಯ

ಮಂಗಳೂರು: ಅಕ್ರಮ ಮರಳುಗಾರಿಕೆ, ಕೆಂಪು ಕಲ್ಲುಗಣಿಗಾರಿಕೆ ನಿಷೇಧದಿಂದಾಗಿ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ಒದಗಿಸಬೇಕು, ಪರಿಸರ ಸ್ನೇಹಿ ಮರಳುಗಾರಿಕೆ ಹಾಗೂ ನಿಯಮ ಬದ್ಧ ಕೆಂಪು ಕಲ್ಲುಗಣಿಗಾರಿಕೆಗೆ ಅವಕಾಶ ನೀಡಬೇಕು, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು, ಕೆಂಪು ಕಲ್ಲು ಜಲ್ಲಿ ಸಿಗಬೇಕು ಎಂದು ಆಗ್ರಹಿಸಿ ಸಿಐಟಿಯು ಮತ್ತು ಕಟ್ಟಡ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕರು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿದರು. ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ ಜಿಲ್ಲೆಯ ಕೋಮು ರಾಜಕಾರಣವನ್ನು ನಿಯಂತ್ರಿಸಲು ವ್ಯಾಪಕ ಹಣದ ಹೊಳೆಯನ್ನು ಹರಿಸುವ ಅಕ್ರಮ ಮರಳುಗಾರಿಕೆಯನ್ನು ನಿಷೇಧ ಮಾಡಿರುವ ಪೊಲೀಸ್‌ ಇಲಾಖೆ, ಜಿಲ್ಲಾಡಳಿತದ ಕ್ರಮ ಶ್ಲಾಘನೀಯ. ಆದರೆ ಮರಳು ಹಾಗೂ ಕೆಂಪು ಕಲ್ಲಿನ ವಿಪರೀತ ದರದಿಂದಾಗಿ ಜನಸಾಮಾನ್ಯರು ಕಂಗಾ ಲಾಗಿದ್ದಾರೆ. ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಕಾರ್ಮಿಕರು ಕೆಲಸ ಕಳೆದುಕೊಂಡು ಬದುಕು ದುಸ್ತರಗೊಂಡಿದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಕರಾವಳಿ ಪ್ರದೇಶದಲ್ಲಿ ಉದ್ಭವಗೊಂಡ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ರಾಜ್ಯ ಕೇಂದ್ರ ಸರಕಾರಗಳು ಕೂಡಲೇ ಗಮನಹರಿಸಬೇಕೆಂದು ಆಗ್ರಹಿಸಿದರು. ಸಂಘಟನೆಯ ಜಿಲ್ಲಾ ನಾಯಕ ರವಿಚಂದ್ರ ಕೊಂಚಾಡಿ ಮಾತನಾಡಿ ಕೈಗೆಟಕುವ ದರದಲ್ಲಿ ಮರಳು ಕೆಂಪು ಕಲ್ಲು ಹಾಗೂ ಜೆಲ್ಲಿ ಸಿಗುವಂತಾಗಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು ಎಂದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಜಿಲ್ಲೆಯ ಅಕ್ರಮ ಮರಳುಗಾರಿಕೆ ಸಹಿತ ಅಕ್ರಮ ದಂಧೆಗಳಿಗೆ ಬಿಜೆಪಿ, ಕಾಂಗ್ರೆಸ್‌ ಅಡಿಪಾಯ ಹಾಕಿದೆ. ಆ ಮೂಲಕ ಎಲ್ಲಾ ಅಕ್ರಮಗಳಲ್ಲಿ ಒಂದಾಗಿ ನಿಂತು ಜಿಲ್ಲೆಯ ಸೌಹಾರ್ದತೆಯನ್ನೇ ಬಲಿ ಕೊಟ್ಟಿದೆ ಎಂದು ಹೇಳಿದರು.

ಪ್ರತಿಭಟನೆಗೂ ಮುನ್ನ ನಗರದ ಅಂಬೇಡ್ಕ‌ರ್ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟು ರಾಜ್ಯ ಸರಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಕಟ್ಟಡ ಕಾರ್ಮಿಕರ ಸಂಘಟನೆಯ ನಾಯಕರಾದ ದಿನೇಶ್‌ ಶೆಟ್ಟಿ, ಚಂದ್ರಹಾಸ ಪಿಲಾರ್, ಅಶೋಕ್‌ ಶ್ರೀಯಾನ್, ಲೋಕೇಶ್ ಎಂ, ಅಶೋಕ್ ಸಾಲಿಯಾನ್, ಜಯಶೀಲ ವಾಮಂಜೂರು, ರಿಚರ್ಡ್ ಕ್ರಾಸ್ತಾ, ದೀಪಕ್ ಬಜಾಲ್, ಡಿವೈಎಫ್‌ಐ ನಾಯಕರಾದ ಸಂತೋಷ್ ಬಜಾಲ್, ರಿಝಾನ್ ಹರೇಕಳ, ನವೀನ್ ಕೊಂಚಾಡಿ, ರಫೀಕ್ ಹರೇಕಳ, ಜಗದೀಶ್ ಬಜಾಲ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ