ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಅವರು ಅನುದಾನ ಹೆಚ್ಚು ನೀಡುವಂತೆ ಕೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರ ಸಮಸ್ಯೆಗಳ ಪರಿಹಾರ ಕಂಡು ಹಿಡಿಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಲಾಭವಾಗಿದೆ. ಸರಕಾರ ಜನಪರ ಯೋಜನೆ ಗಳನ್ನು ಜಾರಿಗೆ ತಂದಾಗ ವಿಪಕ್ಷಗಳಿಂದ ವಿರೋಧ ಸಹಜ. ಹಿಂದೆ ಉದ್ಯೋಗ ಖಾತರಿ ಯೋಜನೆ, ಸರ್ವಶಿಕ್ಷಾ ಅಭಿಮಾನ, ಆರ್‌ಟಿಎ ಜಾರಿಗೆ ತಂದಾಗಲೂ ವಿರೋಧ ಕಂಡು ಬಂತು. ಬಡತನ ಮುಕ್ತಗೊಳಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದರೆ ಯಾರು ಸೋಮಾರಿ ಆಗುದಿಲ್ಲ ಎಂದು ಹೇಳಿದರು.
ದ.ಕ. ಜಿಲ್ಲೆಯ ಇತ್ತೀಚಿನ ಬೆಳವಣಿಗೆ ಬಗ್ಗೆ ಕೆಪಿಸಿಸಿ ರಚಿಸಿದ ಸಮಿತಿಯು ಈಗಾಗಲೇ ಪಕ್ಷಕ್ಕೆ ವರದಿ ಸಲ್ಲಿಸಿದೆ. ದ.ಕ. ಜಿಲ್ಲೆಯಲ್ಲಿ ಸರ್ವಧರ್ಮದ ಗುರುಗಳನ್ನು ಸೇರಿಸಿಕೊಂಡು ಶಾಂತಿ ಸಭೆಯನ್ನು ನಡೆಸ ಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿರುವುದಾಗಿ ತಿಳಿಸಿದ ಹರಿಪ್ರಸಾದ್ ಅವರು ರಾಜಕಾರಣಿ ಗಳನ್ನು ಸೇರಿಸಿಕೊಂಡು ಸಭೆ ನಡೆಸಿದರೆ ಏನು ಪ್ರಯೋಜನ ಆಗುವುದಿಲ್ಲ. ಸಮಾಜದಲ್ಲಿ ಶಾಶ್ವತವಾಗಿ ಶಾಂತಿ, ಸಾಮರಸ್ಯವನ್ನು ಮೂಡಿಸುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ದ.ಕ. ಜಿಲ್ಲೆ ಹಿಂದಿನ ಕೇರಳದಂತೆ ಹುಚ್ಚಾಸ್ಪತ್ರೆ ಆಗುತ್ತದೆ ಎಂದು ಎಚ್ಚರಿಸಿದರು.