image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಲ್ಲಾ ಕಡೆ ಕಾನೂನು ಕಠಿಣವಾಗಿದೆ : ಗೃಹ ಸಚಿವ ಡಾ.ಜಿ. ಪರಮೇಶ್ವರ್

ಎಲ್ಲಾ ಕಡೆ ಕಾನೂನು ಕಠಿಣವಾಗಿದೆ : ಗೃಹ ಸಚಿವ ಡಾ.ಜಿ. ಪರಮೇಶ್ವರ್

ಸುಬ್ರಹ್ಮಣ್ಯ : "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ" ಎಂದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಅವರು, "ಇತ್ತೀಚೆಗೆ ನಡೆದ ಕಾನ್ಫೆರೆನ್ಸ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ, ವಿವಿಧ ಅಪರಾಧಗಳ ಬಗ್ಗೆ ಮಾಹಿತಿ ಪಡೆದ ವೇಳೆ ಕ್ರೈಮ್ ರೇಟ್ ಕಡಿಮೆಯಾಗಿರುವುದು ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೇ ಎಲ್ಲ ಕಡೆ ಕಾನೂನುನನ್ನು ಬಹಳ ಕಠಿಣವಾಗಿ ತೆಗೆದುಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗಮನಿಸಿದಾಗ ಕಠಿಣ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಇದೀಗ ಇಲ್ಲಿನ ಕಾನೂನು ಸುವ್ಯವಸ್ಥೆ ಉತ್ತಮವಾಗಿರಲು ಸಾಧ್ಯವಾಗಿದೆ". "ವಿಶೇಷ ಕಾರ್ಯಪಡೆಯ ರಚನೆಯಿಂದ ಜಿಲ್ಲೆಯ ಶಾಂತಿ - ಸುವ್ಯವಸ್ಥೆಗೆ ಪೂರಕವಾಗಿದೆ. ಈ ಬಗ್ಗೆ ಇಂದು ಹಲವರ ಬಳಿ ವಿಚಾರಿಸಿದ್ದಾಗ ಶ್ಲಾಘನೆ ವ್ಯಕ್ತವಾಗಿದೆ. ಬೆಂಗಳೂರು ಬಳಿಕ ಬೆಳೆಯುವಲ್ಲಿ ಅವಕಾಶಗಳಿರುವ ಕರಾವಳಿಯಲ್ಲಿ ಶಾಂತಿವ್ಯವಸ್ಥೆಗಳು ಅತೀ ಮುಖ್ಯ. ಇಲ್ಲಿ ಶಾಂತಿ ನೆಲೆಸಿದರೆ ಉದ್ಯಮಗಳು, ಉದ್ಯೋಗಗಳು ಸೃಷ್ಟಿಯಾಗುತ್ತದೆ. ಅದಕ್ಕಾಗಿ ಈ ಭಾಗಕ್ಕೆ ಹೆಚ್ಚು ಗಮನ ಹರಿಸುತ್ತೇವೆ. ಇಲ್ಲಿ ಒಂದೆರಡು ಜನ ಬೇರೆ ರೀತಿಯಲ್ಲಿ ಇದ್ದರೂ ಜಿಲ್ಲೆಯ ಜನ ಉತ್ತಮರಾಗಿರುವವರು" ಎಂದರು.

"ಪೊಲೀಸರ ವರ್ಗಾವಣೆಯಿಂದ ಏನು ಪರಿಣಾಮ ಆಗಿದೆ ಎಂದು ನೀವೇ ಮಾಧ್ಯಮದವರು ಹೇಳಬೇಕು. ಜನರು ಎಲ್ಲರೂ ಚೆನ್ನಾಗಿ ಕಾನೂನು ಪಾಲನೆ ಮಾಡಿದರೆ ಪೊಲೀಸ್‌ನವರು ಯಾಕೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ತಪ್ಪು ಮಾಡಿದವರನ್ನು ಸರಿಪಡಿಸಲು ಪೊಲೀಸ್ ಇಲಾಖೆ ಇದೆ. ಅದಕ್ಕಾಗಿ ಕಾನೂನು, ನಿಯಮಗಳನ್ನು ರೂಪಿಸಲಾಗುತ್ತಿದೆ" ಎಂದು ತಿಳಿಸಿದರು. "ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಎಲ್ಲಾ ವರ್ಗದ ಜನರೊಂದಿಗೆ ಸಭೆ ನಡೆಸುತ್ತೇವೆ. ಅಲ್ಲಿ ಜನರ ಸಲಹೆಗಳನ್ನು ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ನೇಮಕಾತಿ ನಡೆಯುತ್ತಿದೆ. 515 ಎಸ್​​​ಐ ಗಳಿಗೆ ಆದೇಶ ನೀಡಲಾಗಿದ್ದು, ಅವರು ತರಬೇತಿಗೆ ಹೋಗಿದ್ದಾರೆ. ಇನ್ನೂ 402 ಹುದ್ದೆಗೆ ಆದೇಶವಾಗಲಿದೆ. 10 ರಿಂದ 15 ಸಾವಿರ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಅದನ್ನು ಭರ್ತಿ ಮಾಡಲು ಕ್ರಮಕೈಗೊಳ್ಳುತ್ತೇವೆ" ಎಂದು ಮಾಹಿತಿ ನೀಡಿದರು. "ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್​ ಹೊರ ಠಾಣೆ ಬೇಡಿಕೆ ಬಗ್ಗೆ, ಎಸ್ಪಿ ಅವರಿಂದ ಪ್ರಸ್ತಾವನೆ ಬಂದಲ್ಲಿ ಪರಿಶೀಲನೆ ನಡೆಸಿ. ಕ್ರಮಕೈಗೊಳ್ಳುತ್ತೇವೆ. ಮಂಗಳೂರಿನ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಸಾಧಕ-ಬಾಧಕಗಳನ್ನು ಸಂಗ್ರಹಿಸಿ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಉತ್ತರಿಸಿದರು.

Category
ಕರಾವಳಿ ತರಂಗಿಣಿ