ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲಿ ಅಧಿಕೃತವಾಗಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ಗಾರಿಗೆ ಮತ್ತು ಕಲ್ಲು ಗಣಿಗಾರಿಕೆಯನ್ನು ಸ್ಥಳೀಯ ಆಡಳಿತದಿಂದಲೇ ನಡೆಸಲು ಕ್ರಮ ಕೈಗೊಳ್ಳಬೇಕು. ಎಲ್ಲರಿಗೂ ಕಡಿಮೆ ದರದಲ್ಲಿ ಸರಳವಾಗಿ ಮತ್ತು ಸರಾಗವಾಗಿ ಮರಳು ಪೂರೈಕೆ ಆಗುವಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉದ್ಯೋಗ ಅವಕಾಶಗಳು ಸಿಗುವಂತೆ ಶೀಘ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರಗತಿಪರ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಎಐಸಿಸಿಟಿಯು) ದ.ಕ ಜಿಲ್ಲಾ ಸಮಿತಿ ವತಿಯಿಂದ ಬಂಟ್ವಾಳ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಿಷೇಧದಿಂದ ಕಟ್ಟಡ, ಮನೆ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು ಸ್ಥಗಿತ ವಾಗಿವೆ. ಈ ರೀತಿಯ ತೀರ್ಮಾಣಗಳನ್ನು ತೆಗೆದುಕೊಳ್ಳುವಾಗ ಅಧಿಕೃತ ಯೋಜನೆಗಳಿಗೆ ತೊಂದರೆ ಗಳು ಆಗದ ಹಾಗೆ ಕ್ರಮ ಕೈಗೊಳ್ಳಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಗಳಿಂದಲೇ ಅಧಿಕೃತವಾಗಿ ಮರಳು ದೊರೆಯಬೇಕು ಅಧಿಕೃತ ಮರಳು ಮತ್ತು ಕೆಂಪು ಕಲ್ಲು ಪೂರೈಕೆ ಆಗದೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತೀವ್ರವಾದ ಸಮಸ್ಯೆಯನ್ನು ಎದುರಿಸಿದ್ದಾರೆ. ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಆದುದರಿಂದ ಸರಕಾರ ಶೀಘ್ರವಾಗಿ ಮಧ್ಯ ಪ್ರವೇಶಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವು ಸ್ವಾಗತಿಸುತ್ತದೆ.
ಆದರೆ ಅದರ ಜೊತೆ ಜೊತೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕೃತವಾಗಿ ಮರಳು ಕೆಂಪು ಕಲ್ಲು ತೆಗೆಯಲು ಅವಕಾಶ ಮಾಡಿಕೊಡಬೇಕಾದ ಆಡಳಿತ ತನ್ನ ಜವಾಬ್ದಾರಿಯಿಂದ ನಯಣುಚಿಕೊಳ್ಳುವುದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಿಯೋಗದಲ್ಲಿ ಸಂಘದ ಆದ್ಯಕ್ಷ ರಾಮಣ್ಣ ವಿಟ್ಲ ಕಾರ್ಯದರ್ಶಿ ಅಚ್ಯುತ ಕಟ್ಟೆ, ಮುಖಂಡರಾದ ರಾಜಾ ಚೆಂಡ್ತಿಮಾರ್, ರಘುರಾಮ ಪಳೇರಿ ಉಪಸ್ಥಿತರಿದ್ದರು.