ಪಡುಬಿದ್ರಿ: ದೇಶದ ಪ್ರಗತಿಯಲ್ಲಿ ಸಹಕಾರ ಸಂಘದ ಪಾತ್ರ ಹಿರಿದಾಗಿದೆ. ಸಹಕಾರಿ ಸಂಘವನ್ನು ಬೆಳೆಸಿದರೆ, ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅಂತರಾಷ್ಟ್ರೀಯ ಸಹಕಾರಿ ವರ್ಷ-2025 ಸಲುವಾಗಿ ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತದೆ" ಎಂಬ ಧೈಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆದೇಶದನ್ವಯ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದೊಂದಿಗೆ ಪಡುಬಿದ್ರಿ ಸಿ.ಎ.ಸೊಸೈಟಿ ನೇತೃತ್ವದಲ್ಲಿ ಸಹಕಾರ ಸಪ್ತ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸವಲತ್ತುಗಳನ್ನು ಸಹಕಾರಿ ಸಂಸ್ಥೆಗಳ ಮೂಲಕ ನೀಡಿದಲ್ಲಿ ಜನರಿಗೆ ಇನ್ನಷ್ಟು ಪ್ರಯೋಜನವಾಗಲಿದೆ. ಇದರಿಂದ ಮಧ್ಯವರ್ತಿಗಳಲಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ಯೋಜನೆ ಸುಲಭದಲ್ಲಿ ಸಿಗಲಿದೆ. ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರಗಳ ಸೂಚನೆಯಂತೆ ಅಂತರಾಷ್ಟ್ರೀಯ ಸಹಕಾರಿ ವರ್ಷ-2025 ಸಲುವಾಗಿ ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತದೆ ಎಂಬ ಧೈಯೆಯೊಂದಿಗೆ ಸೊಸೈಟಿಯ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಹಸಿರು ಕ್ರಾಂತಿ ನಡೆಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕಾ ಸೊಸೈಟಿಯ ಕಾರ್ಯ ವೈಖರಿ ನಾನು ಬಲ್ಲೆ. ಗ್ರಾಹಕರೊಂದಿಗೆ ಉತ್ತಮ ವ್ಯವಹಾರ ಮಾಡುತ್ತಿರುವ ಸೊಸೈಟಿ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಶ್ರೀಮಂತರ ಕೈಯಲ್ಲಿದ್ದ ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಜನಸಾಮಾನ್ಯರ ಬ್ಯಾಂಕ್ ಆಗಿ ಪರಿವರ್ತನೆ ಗೊಂಡಿತು. ಅಂದು ಕೆಂದ್ರದ ಸಚಿವರಾಗಿದ್ದ ಜನಾರ್ಧನ ಪೂಜಾರಿ ಅವರು ಬಡ್ಡಿ ರಹಿತ ಸಾಲ ನೀಡುವ ಮೂಲಕ ಗಮನಸೆಳೆದಿದ್ದರು. ಆದರೆ ಇಂದಿನ ಕೆಂದ್ರ ಸರಕಾರ ರೈತರ ಸಾಲ ಮನ್ನಾ ಮಾಡುವ ಬದಲು ಕಲವು ಶ್ರೀಮಂತ ಉದ್ಯಮಿಗಳ ರೂ.14 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವುದು ದುರಾದೃಷ್ಟ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕರಾದ ಐ. ದೇವಿಪ್ರಸಾದ್ ಶೆಟ್ಟಿ ಬೆಳಪು, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ ಸುವರ್ಣ, ನಿವೃತ್ತ ಮುಖ್ಯೋಪಾಧ್ಯಾಯರಾದ ಅನಂತ ಪಟ್ಟಾಭಿರಾವ್, ಪಡುಬಿದ್ರಿ ಸಿಎ ಸೊಸೈಟಿಯ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಚ್. ಪುತ್ರನ್, ಕಾರ್ಯಕ್ರಮ ಸಂಚಾಲಕ ನಿಖಿಲ್ ಉಪಸ್ಥಿತರಿದ್ದರು.