ಮಂಗಳೂರು : ಶಾಂತಿನಗರದಲ್ಲಿ ಬೀದಿನಾಯಿಗಳ ಗುಂಪು 7 ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ. ತಾಯಿ ಮತ್ತು ಮಗಳು ಗಾಂಧಿನಗರದ ನೆಂಟರ ಮನೆಗೆ ಬರುತ್ತಿದ್ದ ವೇಳೆ ನಾಯಿಗಳು ದಾಳಿ ಮಾಡಿವೆ. ಮಗುವಿನ ಕೈಗೆ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಗುವಿನ ಬೊಬ್ಬೆ ಕೇಳಿ ಪಕ್ಕದ ಮನೆಯವರು ನಾಯಿಗಳನ್ನು ಓಡಿಸಿದ್ದಾರೆ. ಇಲ್ಲವಾದರೆ ಮಗುವಿನ ಸ್ಥಿತಿ ಚಿಂತಿಸಲೂ ಸಾಧ್ಯವಿಲ್ಲದ ರೀತಿಯಲ್ಲಿರುತ್ತಿತ್ತು ಎಂದು ಗಾಂಧಿನಗರ ನಿವಾಸಿಗಳು ದೂರಿದ್ದಾರೆ.
ಈ ದಾಳಿಗೂ ಎರಡು ದಿನ ಮುನ್ನ ಮಗುವಿನ ಮೇಲೆ ಸುಮಾರು ಎಂಟು ನಾಯಿಗಳು ದಾಳಿ ಮಾಡಿವೆ. ಆಗಲೂ ಸ್ಥಳೀಯರು ಬಂದು ಮಗುವನ್ನು ನಾಯಿಗಳ ದಾಳಿಯಿಂದ ರಕ್ಷಿಸಿದ್ದರು ಎಂದು ಗ್ರಾಮಸ್ಥರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಸರಿಯಾದ ರಸ್ತೆ ಇಲ್ಲದೆ, ಆಟೊ ರಿಕ್ಷಾ, ಶಾಲಾ ಬಸ್ ಗಳು ಹೆದ್ದಾರಿಯಲ್ಲೆ ನಿಲ್ಲಬೇಕಿದೆ. ಹಾಗಾಗಿ ಮಕ್ಕಳು ದುರಸ್ತಿಯಾಗದಿರುವ ರಸ್ತೆಯಲ್ಲಿ ನಡೆದು ಸಾಗಬೇಕಿದೆ. ಇದರಿಂದಾಗಿ ನಾಯಿಗಳ ದಾಳಿಗೆ ತುತ್ತಾಗುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.