ಮಂಗಳೂರು: ನವಮಂಗಳೂರು ಬಂದರಿನ ಕಸ್ಟಮ್ಸ್ ಹೌಸ್ ಬಳಿ ಟ್ರಕ್ ಪಾರ್ಕಿಂಗ್ ಟರ್ಮಿನಲ್ ವಿಸ್ತರಣೆ ಯೋಜನೆಗೆ ಕೇಂದ್ರ ಸರಕಾರದ ಬಂದರು, ಹಡಗು ಮತ್ತು ಜಲಸಾರಿಗೆ (ಎಂಒಪಿಎಸ್‌ಡಬ್ಲ್ಯು) ಸಚಿವಾಲಯದ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು ಹೊಸದಾಗಿ ನಿರ್ಮಿಸಲಾದ ಭದ್ರತಾ ಕಣ್ಣಾವಲು ಗೋಪುರ ವನ್ನು ಉದ್ಘಾಟಿಸಿದರು. “ಕಣ್ಣಾವಲು ಗೋಪುರವು ಬಂದರಿನ ಅತ್ಯುನ್ನತ ಮಟ್ಟದ ಕಡಲ ಸುರಕ್ಷತೆಯನ್ನು ಖಾತ್ರಿಪಡಿಸುವ ಬದ್ಧತೆ ಯನ್ನು ಸಂಕೇತಿಸುತ್ತದೆ. ಈ ಗೋಪುರವನ್ನು ದಿನದ 24 ಗಂಟೆಗಳಲ್ಲೂ ಬಂದರು ಚಟುವಟಿಕೆಗಳನ್ನು ನಿರಂತರ ಮೇಲ್ವಿಚಾರಣೆ ಮಾಡಲು ನಿರ್ಮಿಸಲಾಗಿದೆ ಎಂದು ಟಿ.ಕೆ ರಾಮಚಂದ್ರನ್ ಅಭಿಪ್ರಾಯಪಟ್ಟರು.
ಬಂದರಿನ ಅಂತರ್‌ರಾಷ್ಟ್ರೀಯ ಕ್ರೂಸ್ ಲಾಂಜ್ ಭೇಟಿ ನೀಡಿ ಅಂತರ್‌ರಾಷ್ಟ್ರೀಯ ಕ್ರೂಸ್ ಪ್ರವಾಸಿಗರಿಗೆ ವಿಸ್ತರಿಸಲಾದ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದರು. ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ಸ್ವಯಂಚಾಲಿತ ತೂಕ ಸೇತುವೆಗಳು, ಡೋನ್ ಆಧಾರಿತ ಕಣ್ಣಾವಲು, ಸ್ವಯಂಚಾಲಿತ ಅಗ್ನಿಶಾಮಕ, ಬಂದರು ದಾಖಲೆಗಳ ಡಿಜಿಟಲ್ ಸಂಸ್ಕರಣೆ, ಇ-ಕಾರ್ಟ್ ಟಿಕೆಟಿಂಗ್ ಇತ್ಯಾದಿ ಸೇರಿದಂತೆ ಅತ್ಯಾಧುನಿಕ ಯಾಂತ್ರೀಕೃತಗೊಂಡ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಎನ್‌ಎಂಪಿಎ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಅಧ್ಯಕ್ಷ ಡಾ. ಎ.ವಿ. ರಮಣ, ಬಂದರಿನ ಪ್ರಮುಖ ಮೂಲಸೌಕರ್ಯ, ಸೌಲಭ್ಯಗಳು, ವಿವಿಧ ಯೋಜನೆ ಗಳು, ಪ್ರಮಾಣೀಕರಣಗಳು, ಸಾಧನೆಗಳು ಮತ್ತು ಬಂದರಿನ ಕಾರ್ಯಾಚರಣೆಯ ಸಾಮರ್ಥ್ಯಗಳ ಬಗ್ಗೆ ಪ್ರಮುಖ ಮೂಲಸೌಕರ್ಯ ಯೋಜನೆಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.