ಮಂಗಳೂರು: ಪತ್ರಿಕೋದ್ಯಮದ ಹೃದಯ ಬಡಿತವೇ ನಿರ್ಭೀತ ವರದಿಗಾರಿಕೆ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.ನಗರದ ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಪತ್ರಕರ್ತ ವಿಜಯ ಕೋಟ್ಯಾನ್‌ರಿಗೆ ಪ್ರಸಕ್ತ ಸಾಲಿನ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿ, ರಷ್ಯಾದ ಪತ್ರಕರ್ತೆಯಾಗಿದ್ದ ಅನ್ನಾ ಪೊಲಿಟ್ಕೋವಸ್ಕಾಯರ ನಿರ್ಭೀತ ವರದಿಗಾರಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಸುಧೀರ್ ರೆಡ್ಡಿ, ಭಾರತದಲ್ಲಿಯೂ ಅಂತಹ ಪತ್ರಕರ್ತರಿದ್ದಾರೆ. ತಾವು ಮಾಡುವ ಕೆಲಸದಲ್ಲಿ ನೈಜ ಉದ್ದೇಶವಿದ್ದಾಗ ಧೈರ್ಯ ತಾನಾಗಿಯೇ ಬರುತ್ತದೆ. ಯಾವುದಕ್ಕೂ ಭಯ ಪಡುವ ಅಗತ್ಯ ಇರುವುದಿಲ್ಲ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಬಹಳ ವರ್ಷಗಳ ಹಿಂದೆ ರುವಾಂಡದಲ್ಲಿ ನರಮೇಧ ನಡೆದಿತ್ತು. ಬಳಿಕ ಅಲ್ಲಿ ಸಮುದಾಯಗಳು ಪರಸ್ಪರ ಪ್ರತ್ಯೇಕಗೊಂಡಿದ್ದವು. ಒಬ್ಬರಿಗೊಬ್ಬರು ಮಾತುಕತೆಯೇ ಇರಲಿಲ್ಲ. ಆದರೆ ಅಲ್ಲಿನ ರೇಡಿಯೋ, ಮಾಧ್ಯಮ ಸುದ್ದಿಗಳು ಅಲ್ಲಿ ನಡೆಯುತ್ತಿದ್ದ ಒಳ್ಳೆಯತನವನ್ನು ಎತ್ತಿ ತೋರಿಸಿದವು. ನಿಧಾನಗತಿಯಲ್ಲಿ ಸಮುದಾಯಗಳ ನಡುವಿನ ಅನುಮಾನ ದೂರವಾಗಿ ಅಲ್ಲಿ ದುಷ್ಕರ್ಮಿಗಳನ್ನು ಬೇರ್ಪಡಿಸುವ ಕಾರ್ಯ ಆಗಿದೆ. ಅದೇ ಪ್ರಯತ್ನ ಇಲ್ಲಿಯೂ ಮಾಡಬಹುದು. ಆ ಧೈರ್ಯ, ಬದ್ಧತೆ ನಮಗೆ ಬೇಕಾಗಿದೆ.ಇಂತಹ ಪ್ರದೇಶದಲ್ಲಿ ನಾವು ಸಾಮಾನ್ಯವಾಗಿ ವರದಿಗಾರಿಕೆ ಮಾಡಬೇಕಾದರೆ ಏನು ಬೇಕು ಎಂಬುದನ್ನು ನಾವು ಅರಿಯಬೇಕು. ವರದಿಯನ್ನು ತಲುಪಿಸುವ ವೇಗಕ್ಕಿಂತ ನಿಖರತೆ ಮುಖ್ಯ. ಬಾಯಿಗೆ ಬಂದದ್ದನ್ನು ಹೇಳಿ ಬಿಟ್ಟು ಅದರಿಂದ ಇನ್ನೊಂದು ಅನ್ಯಾಯ ಆಗಲು ಅವಕಾಶ ನೀಡುವ ಬದಲು ಬರೆಯುವ ಸುದ್ದಿಯ ನಿಖರತೆ ಮುಖ್ಯವಾಗಿರುತ್ತದೆ. ಯಾವುದೇ ಸಮಸ್ಯೆಗಳ ಸಂದರ್ಭ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕಿಂತಲೂ ಸತ್ಯವನ್ನು ಎತ್ತಿ ತೋರಿಸುವುದು ಪ್ರಮುಖವಾಗಬೇಕು. ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವ ಉz್ದÉÃಶದಿಂದ ಆರೋಪಿ ಮತ್ತು ಸಂತ್ರಸ್ತರನ್ನು ಒಂದೇ ಆಗಿ ಪರಿಗಣಿಸಲಾಗದು. ಸತ್ಯದ ಬಗ್ಗೆ ಬರೆಯುವಾಗ ಸಮಸ್ಯೆ ಖಂಡಿತಾ ಬರುತ್ತದೆ. ಆದರೆ ಸತ್ಯ ಬರೆಯುವಾಗ ಯಾವುದೇ ರೀತಿಯ ಯಾವುದೇ ಭಯ ಬೇಡ. ಜತೆಗೆ ಸಹಾನುಭೂತಿ ಬರವಣಿಗೆಯಲ್ಲಿ ಇದ್ದಾಗ ಯಾರಿಗೂ ಸಮಸ್ಯೆ ಬರುವುದಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಸಮಧಾನ ಹೇಳಬೇಕೆಂಬುದರ ಅರಿವಿದ್ದಾಗ ಯಾವುದೇ ಸಮಸ್ಯೆ ಎದುರಾಗದು. ಸಮಾಜವೂ ನಿಧಾನಕ್ಕೆ ಗುಣಮುಖವಾಗುತ್ತದೆ. ಬೆಳಕು ಬಂದಾಗ ಕತ್ತಲು ಮಾಯವಾಗುವಂತೆ, ಆ ಬೆಳಕು ಪತ್ರಿಕೋದ್ಯಮವಾಗಬೇಕು. ಆ ಶಕ್ತಿಯನ್ನು ಪತ್ರಕರ್ತರು ತುಂಬಿಲ್ಲವಾದರೆ, ಸಮಾಜದಲ್ಲಿನ ಕತ್ತಲು ಹೋಗದು. ಇದರಿಂದ ಶೇ. 98 ಜನ ಶೇ. 2ರಷ್ಟು ಜನರಿಂದ ತೊಂದರೆಗೆ ಒಳಗಾಗುವುದು ಮುಂದುವರಿಯುತ್ತಲೇ ಸಾಗುತ್ತದೆ ಎಂದು ಎಚ್ಚರಿಕೆಯ ನುಡಿಗನ್ನಾಡಿದರು.
ಜಾಗೃತ ವರದಿಗಾರಿಕೆ, ಹೃದಯವಂತಿಕೆಯ ಪತ್ರಿಕೋದ್ಯಮ ನಮ್ಮ ಅಗತ್ಯ. ಅದ್ಯಾವ ತೊಂದರೆ, ಸಮಸ್ಯೆ ಆದರೂ ಮುಂದಿನ ದಿನಗಳಲ್ಲಾದರೂ ಶಾಶ್ವತ ಶಾಂತಿ ನೆಲೆಯಾಗಲೇಬೇಕು. ಆವಾಗ ತಿರುಗಿ ನೋಡಿದಾಗ ಶಾಂತಿಗೆ ಕಾರಣರಾದ ಪತ್ರಕರ್ತರು ಕಾಣಸಿಗಬೇಕು. ಆ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪ್ರಶಸ್ತಿ ವಿಜೇತರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.