ಮಂಗಳೂರು : ದ.ಕ.ಜಿಲ್ಲಾ ಪ್ರಾಣಿ ದಯಾಸಂಘದ ಸಭೆಯು ಜಿಲ್ಲಾಧಿಕಾರಿ ದರ್ಶನ್ ಎಚ್. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಡಿಸಿ ಪ್ರಾಣಿ ಹಿಂಸೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಮುದ್ದು ಪ್ರಾಣಿಗಳ ಮಾರಾಟ ಮಳಿಗೆ ಕಡ್ಡಾಯವಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಸೊಸೈಟಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಎಸ್‌ಪಿಸಿಎ ನೋಂದಣಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಪೆಟ್ ಶಾಪ್‌ಗಳ ಮಾಲಕರಿಗೆ ಕಾಲಮಿತಿ ನಿಗದಿಪಡಿಸಿ, ನಿಗದಿತ ಕಾಲಮಿತಿ ಯೊಳಗೆ ನೋಂದಣಿ ಪಡೆಯದ ಮಾಲಕರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಣಿಗಳ ರಕ್ಷಣೆಯು ಮಹತ್ವದ ಕಾರ್ಯವಾಗಿದೆ. ಜಿಲ್ಲೆಯಲ್ಲಿ ಪ್ರಾಣಿಗಳ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಿ ಅವುಗಳನ್ನು ರಕ್ಷಿಸಬೇಕು. ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸುವುದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ವ್ಯಾಪ್ತಿಯಲ್ಲಿರುವ ನಿರಾಶ್ರಿತ ಪ್ರಾಣಿಗಳಿಗೆ ಅಗತ್ಯ ಶುಶೂಷೆ ಕೊಡುವ ನಿಟ್ಟಿನಲ್ಲಿ ಮಂಗಳೂರು ತಾಲೂಕಿನ ಬೊಂಡಂತಿಲ ಗ್ರಾಮದಲ್ಲಿ ಪ್ರಾಣಿ ಮಿತ್ರ ಆಸ್ಪತ್ರೆ ತೆರೆಯುವ ಯೋಜನೆ ಅನುಷ್ಠಾನದ ಕುರಿತು ಹಾಗೂ ರಸ್ತೆ ಅಪಘಾತ ಮತ್ತಿತರ ಕಾರಣಗಳಿಂದ ಸತ್ತ ಪ್ರಾಣಿಗಳನ್ನು ಯಾರೂ ಸಹ ಮುಟ್ಟುವು ದಿಲ್ಲ. ಅವುಗಳ ಮೃತದೇಹ ಅಲ್ಲಿಯೇ ಕೊಳೆಯುತ್ತಿರುತ್ತವೆ. ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಸೌಲಭ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮೂಕಪ್ರಾಣಿಗಳ ಬಗ್ಗೆ ಅನುಕಂಪ ಮತ್ತು ಮಾನವೀಯತೆಯ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾ ಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂಬಂಧಪಟ್ಟ ಇಲಾಖೆಗಳೊಂದಿಗೆ ಕೈಜೋಡಿಸಿ ಪ್ರಾಣಿ ಕಲ್ಯಾಣ ಮಂಡಳಿಯಿಂದ ಸ್ಥಾಪಿಸಲ್ಪಟ್ಟ ಪ್ರಾಣಿ ಕಲ್ಯಾಣ ಕಾನೂನು ಜಾರಿಯ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಎಸಿಪಿ ಗೀತಾ ಕುಲಕರ್ಣಿ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಸಮಿತಿಯ ಸದಸ್ಯೆ ಸುಮಾ ಆರ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.