ಮಂಗಳೂರು: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ಸಂಬಂಧಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಎಂದು ದ.ಕ. ಜಿಲ್ಲಾ ಪಂಚಾಯತ್ ಹೊರಡಿಸಿದ್ದ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಸ್ಪಷ್ಟಿಕರಣ ನೀಡಿರುವ ದ.ಕ. ಜಿಪಂ, ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆ ಕುರಿತು ಯಾವುದೇ ನಿರ್ಬಂಧ-ನಿರ್ದೇಶನ ಆದೇಶ ನೀಡಿಲ್ಲ ಎಂದು ಹೇಳಿದೆ.
ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತ ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕಾರ್ಕಳದ ಯಶಸ್ವಿ ನಾಗರಿಕ ಸೇವಾ ಸಂಘದ ಸಂಚಾಲಕ ಮುರಳೀಧರ್ ಎಂಬವರು ದ.ಕ. ಜಿಪಂಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನವಿಯ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಸುತ್ತೋಲೆ ಹೊರಡಿಸಿತ್ತು. ಇದರ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ತುಳು ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.
ತುಳು ಭಾಷೆ - ಕನ್ನಡ ನಾಡಿನ ಮಣ್ಣಿನ ಭಾಷೆ. ನಮ್ಮ ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎನ್ನುವ ಸರಕಾರದ ಆದೇಶ! ಹಾಗಾದರೆ, ಉರ್ದು ಭಾಷೆಯ ಬಳಕೆ ಸರಕಾರಿ ಕಡತದಲ್ಲಿ ಮಾಡಬಹುದೇ ? ಮಿಸ್ಟರ್ ಟ್ರೊಲ್ ಮಿನಿಸ್ಟರ್ ಎಲ್ಲಿದ್ದೀರಾ ?" ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜಿಪಂ ಸುತ್ತೋಲೆಯ ಫೋಟೋದೊಂದಿಗೆ ತನ್ನ ಎಕ್ಸ್' ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿ ವಿರೋಧ ವ್ಯಕ್ತಪಡಿಸಿದ್ದರು.