ಮಂಗಳೂರು: ನಗರದ ಪಿವಿಎಸ್ ಪಕ್ಕದಲ್ಲಿರುವ ಪರಿಶಿಷ್ಟರಿಗೆ ಮೀಸಲಾದ ಡಾ.ಬಿ.ಆರ್.ಅಂಬೇಡ್ಕರ್ ವಾಣಿಜ್ಯ ಸಂಕೀರ್ಣದಲ್ಲಿ ಪರಿಶಿಷ್ಟರಿಗೆ ಅಂಗಡಿ ಕೋಣೆ ಬಾಡಿಗೆಗೆ ಕೇಳಿದರೆ ಸಿಗುವುದಿಲ್ಲ. ಆದರೆ ಅದೇ ಕಟ್ಟಡದಲ್ಲಿ ಟೂರಿಸ್ಟ್ ಬಸ್‌ಗಳ ಕಚೇರಿಗಳಿವೆ. ಪರಿಶಿಷ್ಟರಿಗೆ ಮೀಸಲಾದ ಕಟ್ಟಡವನ್ನು ಟೂರಿಸ್ಟ್ ಸಂಸ್ಥೆ ಯವರಿಗೆ ಯಾಕೆ ನೀಡಲಾಗಿದೆ ಎಂದು ಸುಧಾಕರ್ ಬೋಳೂರು ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಜೂನ್ ತಿಂಗಳ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಪ್ರಶ್ನಿಸಿದರು. ಕಟ್ಟಡವನ್ನು ಪಡೆದವರು ಬೇರೆಯವರಿಗೆ ನಡೆಸಲು ಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಅಡಿಗ ಸಭೆಗೆ ಮಾಹಿತಿ ನೀಡಿದರು. ಹಾಗಿದ್ದರೆ ಇದು ದುರುಪಯೋಗವಾಗವಲ್ಲವೇ ? ನಿಯಮ ಉಲ್ಲಂಘನೆ ಮಾಡಿದವರ ಪರವಾನಗಿ ರದ್ದು ಮಾಡುವಂತೆ ಮುಖಂಡರು ಆಗ್ರಹಿಸಿದರು.
ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿ ಸಭೆಗೆ ಭರವಸೆ ನೀಡಿದರು. ಎಸ್‌ಸಿ-ಎಸ್‌ಟಿ ಜಾಗದ ಸಮೀಪ ತ್ಯಾಜ್ಯ ಘಟಕ ನಿರ್ಮಾಣಕ್ಕೆ ತಯಾರಿ: ಕಿನ್ನಿಗೋಳಿ ಪಟ್ಟಣ ಪಂಚಾ ಯತ್ ವ್ಯಾಪ್ತಿಯ ಎಳತ್ತೂರು ಗ್ರಾಮದ ಎಸ್‌ಸಿ-ಎಸ್‌ಟಿ ಕುಟುಂಬದವರು ವಾಸಿಸುವ ಜಾಗದ ಸಮೀಪ ದಲ್ಲೇ ಮುಲ್ಕಿ ಪಟ್ಟಣ ಪಂಚಾಯತ್‌ನಿಂದ ತ್ಯಾಜ್ಯ ಘಟಕ ನಿರ್ಮಿಸಲು ತಯಾರಿ ನಡೆಯುತ್ತಿದೆ. ಒಂದು ವೇಳೆ ಘಟಕ ನಿರ್ಮಾಣವಾದರೆ ಹೋರಾಟ ಅನಿವಾರ್ಯ ಎಂದು ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿದರು. 2005 ರಲ್ಲಿ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಶಾಸಕರು, ಆರ್‌ಐ, ವಿಎ ಎಲ್ಲರಿಗೂ ಈ ವಿಚಾರ ಗೊತ್ತಿದೆ. ಇದರ ಹೊರತಾಗಿಯೂ ಇಲ್ಲಿ ಘಟಕ ನಿರ್ಮಾಣ ಮಾಡಿದರೆ ಹೋರಾಟ ನಡೆಸಲಾಗುವುದು ಎಂದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಪಿಸಿ ಸಿದ್ಧಾರ್ಥ ಗೋಯಲ್ ಉತ್ತರಿಸಿ, ವಿಚಾರವನ್ನು ಸಂಬಂಧ ಪಟ್ಟವರ ಗಮನಕ್ಕೆ ತಂದು ಸೂಕ್ತ ರೀತಿಯಲ್ಲಿ ಬಗೆ ಹರಿಸುವಂತೆ ಸೂಚಿಸಲಾಗುವುದು ಎಂದರು. ದಲಿತ ಮುಖಂಡ ಚಂದ್ರ ಕುಮಾರ್ ಅವರು ಮಾತನಾಡಿ, ದಲಿತರ ಕಾಲನಿಗಳ ಪಕ್ಕದಲ್ಲಿ ತ್ಯಾಜ್ಯ ತಂದು ಸುರಿಯುವ ಪ್ರಕ್ರಿಯೆ ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.