ಮಂಗಳೂರು: ನಗರದ ಮನಪಾದ ಮಂಗಳ ಈಜುಕೊಳದಲ್ಲಿ ಹವ್ಯಾಸಿ ಈಜುಗಾರರು ಜಲಯೋಗ ಮಾಡಿ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶಿಷ್ಟವಾಗಿ ಆಚರಿಸಿದರು. ಈ ವೇಳೆ ಸುಮಾರು 40ಮಂದಿ ಈಜುಗಾರರು ಈಜುತ್ತಾ ಯೋಗ ಮಾಡಿದ್ದಾರೆ. ಇವರು ನೀರಿನಲ್ಲಿ ತೇಲುತ್ತಾ ಶವಾಸನ, ಪದ್ಮಾಸನ ಮುಂತಾದ ಯೋಗ ಭಂಗಿ ಮಾಡಿದರು. ವಿಶೇಷವೆಂದರೆ ಮಂಗಳೂರಿನ ಎಕ್ಕೂರಿನ ಫಿಶರೀಸ್ ಕಾಲೇಜಿನ ನಿವೃತ್ತ ಡೀನ್ ಎಂ.ಎಸ್. ಶಿವಪ್ರಕಾಶ್ ಈಜುತ್ತಾ ಪ್ರಧಾನಿ ಮೋದಿಗೆ ಪತ್ರ ಬರೆದು ಎಲ್ಲರ ಗಮನ ಸೆಳೆದರು.
ಜಲಯೋಗವು ಯೋಗಾಸನ, ಉಸಿರಾಟದ ತಂತ್ರಗಳು ಮತ್ತು ಧ್ಯಾನವನ್ನು ನೀರಿನೊಂದಿಗೆ ಸಂಯೋಜಿಸುವ ಒಂದು ವಿಶೇಷ ಅಭ್ಯಾಸ. ಈಜುಕೊಳದ 16ಅಡಿ ಆಳದ ನೀರಿನಲ್ಲಿ ಈಜುಗಾರರು ಪದ್ಮಾಸನ, ಶವಾಸನ ಮುಂತಾದ ಯೋಗ ಪಟ್ಟುಗಳನ್ನು ಪ್ರದರ್ಶಿಸಿದರು. ನೀರಿನಲ್ಲಿ ತೇಲುವುದರಿಂದ ದೇಹದ ಸ್ನಾಯುಗಳ ಮೇಲಿನ ಒತ್ತಡ ಕಡಿಮೆಯಾಗಿ, ಈ ಆಸನಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಯಿತು. ಸ್ನಾಯುಗಳ ಬಲವರ್ಧನೆಯೂ ಆಗುತ್ತದೆ ಎಂಬುದು ಈಜುಗಾರರ ಮಾತು.