image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಹಾನಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಹಾನಿ ಸಂಭವಿಸಿದೆ. ಮಂಗಳೂರು ನಗರದ ಮಾಲೆಮಾರ್, ಕೊಟ್ಟಾರಚೌಕಿ, ಜೆಪ್ಪಿನಮೊಗರು, ಪಾಂಡೇಶ್ವರ, ಸುಭಾಶ್ ನಗರ ಸಹಿತ ಹಲವೆಡೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಕಾಮಗಾರಿ ಪ್ರಗತಿಯಲ್ಲಿರುವ ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್, ಬಜಾಲ್ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ನಿಂತಿದೆ. ನಗರದಲ್ಲಿ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಅಪಾಯದ ಸ್ಥಿತಿಯಲ್ಲಿವೆ. ಪಂಪ್ ವೆಲ್‌ನ ಮಜಿಕೋಡಿ, ಜೆಪ್ಪಿನಮೊಗರು, ಕೊಟ್ಟಾರ ಚೌಕಿ, ಮಾಲೆಮಾರ್ ಮೊದಲಾದ ಭಾಗಗಳಲ್ಲಿ ನೆರೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿದು ಆತಂಕ ಸೃಷ್ಟಿಯಾಗಿದ್ದು, ನಗರದ ಕದ್ರಿ ಶಿವಭಾಗ್, ಕಂಕನಾಡಿಯಲ್ಲೂ ಬೃಹತ್ ತಡೆಗೋಡೆಗಳು ಉರುಳಿ ಬಿದ್ದು ಕೆಲ ಮನೆಗಳಿಗೆ ಹಾನಿಯಾಗಿದೆ. ಇದೇ ರೀತಿ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳಲ್ಲಿರುವ ಹಲವು ಮನೆಗಳು ಜಲಾವೃತವಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ (ಕೆಎಸ್​ಎನ್​ಡಿಎಂಸಿ) ವರದಿಯ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕೆಲವೆಡೆ ಭಾರೀ ಮಳೆ ದಾಖಲಾಗಿದೆ. ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳಲ್ಲಿ 54 ಮಿ.ಮೀನಿಂದ 215.5 ಮಿ.ಮೀವರೆಗೂ ಮಳೆಯಾಗಿದೆ. ಮಂಗಳೂರಿನ ಭಾಗದಲ್ಲಿ ಅತಿ ಹೆಚ್ಚು 215.5 ಮಿ.ಮೀ ಮಳೆ ದಾಖಲಾಗಿದ್ದು, ಬಜಪೆಯಲ್ಲಿ 206 ಮಿ.ಮೀ, ಬಂಟ್ವಾಳದ ಮಂಚಿಯಲ್ಲಿ 187 ಮಿ.ಮೀ, ಪುದುವಿನಲ್ಲಿ 184.5 ಮಿ.ಮೀ ಮತ್ತು ಬಡಗಬೆಳ್ಳೂರಿನಲ್ಲಿ 177.5 ಮಿ.ಮೀ ಮಳೆಯಾಗಿದೆ. ಉಳ್ಳಾಲ, ಬೆಳ್ತಂಗಡಿ, ಪುತ್ತೂರು, ಮುಲ್ಕಿ, ಮತ್ತು ಸುಳ್ಯ ತಾಲೂಕುಗಳಲ್ಲಿಯೂ ಗಮನಾರ್ಹ ಮಳೆ ದಾಖಲಾಗಿದ್ದು, ಕೆಲವೆಡೆ 100 ಮಿ.ಮೀಗಿಂತಲೂ ಹೆಚ್ಚು ಮಳೆ ಬಿದ್ದಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯೊಂದಿಗೆ, ಕೆಲವೆಡೆ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೆಎಸ್​ಎನ್​ಡಿಎಂಸಿ ಮುನ್ಸೂಚನೆ ನೀಡಿದೆ. ಜೊತೆಗೆ, ರಾಜ್ಯದಾದ್ಯಂತ ಕೆಲವು ಕಡೆ ಗುಡುಗು ಮತ್ತು ಮಿಂಚಿನ ಮಳೆ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದೆ.

Category
ಕರಾವಳಿ ತರಂಗಿಣಿ