ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು-ಮೂಡುಬಿದಿರೆ-ಕಾರ್ಕಳವನ್ನು ಸಂಪರ್ಕಿಸುವ ಈ ರಸ್ತೆಯಲ್ಲೀಗ ವಾಹನ ಸವಾರರು ಆತಂಕದಲ್ಲೇ ಪ್ರಯಾಣ ಮಾಡುವಂತಾಗಿದೆ.
ರಿಕ್ಷಾವೊಂದು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ ಏಕಾಏಕಿ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಆಟೋದ ಮುಂಭಾಗದಲ್ಲೇ ಮಣ್ಣು ಬಿದ್ದಿದ್ದು ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿದೆ. ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಇದೀಗ ಇನ್ನೊಂದು ಬದಿಯ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.