ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಕೃಷ್ಣಾಪುರ ಕಾಟಿಪಳ್ಳ ಇದರ ವತಿಯಿಂದ ನಡೆಯುವ ಶ್ರೀ ಗಣೇಶೋತ್ಸವವು 46 ನೇ ವರ್ಷದ ಸಂಭ್ರಮದಲ್ಲಿದೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ವಿಶೇಷವಾಗಿ ಸೆಪ್ಟೆಂಬರ್ 5 ರಂದು ಶ್ರೀ ಸೀತಾರಾಮ ಕಲ್ಯಾಣೋತ್ಸವ ಮತ್ತು ಸಾಮು ವಿವಾಹ ಮಹೋತ್ಸವವನ್ನು ಆಯೋಜಿಸಲಾಗಿದೆ.
ಹಿಂದೂ ಸಮಾಜದಲ್ಲಿ ವರದಕ್ಷಿಣೆ ರಹಿತ ಸರಳ ವಿವಾಹವನ್ನು ಪ್ರೋತ್ಸಾಹಿಸುವುದು ಬಡವರ್ಗದ ಅರ್ಹರಿಗೆ ನೆರವಾಗುವುದು ವಿವಾಹ ಪ್ರಕ್ರಿಯೆಯಲ್ಲಿ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳಲ್ಲಿ ಜೀವಂತಿಕೆಯನ್ನು ಉಳಿಸುವುದು, ಸರ್ವರಲ್ಲೂ ಸಮಭಾವದ ವಾತಾವರಣ ಕಲ್ಪಿಸಿ ಐಕ್ಯತೆಯ ಸಂದೇಶ ಸಾರುವುದು ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ದೇಶವಾಗಿದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಏಳು ಜೋಡಿಗಳು ವಿವಾಹಕ್ಕಾಗಿ ಹೆಸರು ನೋಂದಾಯಿಸಿದ್ದಾರೆ. ಸಮಿತಿಯ ವತಿಯಿಂದ ವಧು ವರರಿಗೆ ಚಿನ್ನದ ಮಾಂಗಲ್ಯ ಸರ ಬೆಳ್ಳಿ ಕಾಲುಂಗುರ ಧಾರೆ ಸೀರೆ ಸಹಿತ ಪೂರ್ಣ ಉಡುಪು ಮತ್ತಿತರ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ ತಿಳಿಸಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳ ಪ್ರೇರಣೆ ಮತ್ತು ಅರ್ಚಕರ ಅಧ್ವರ್ಯತನದಲ್ಲಿ ನಡೆಯುವ ಸೀತಾರಾಮ ಕಲ್ಯಾಣೋತ್ಸವ ನಿಮಿತ್ತ ರಾಮ ದೇವರ ಆಗಮನ ಮೆರವಣಿಗೆಯು ಮಧ್ಯಾಹ್ನ 3.00 ಕ್ಕೆ ಹೊರಟು ಭವ್ಯವಾದ 'ಮಿಥಿಲಾ ನಗರಿ" ಯಲ್ಲಿ ಸಂಪನ್ನಗೊಳ್ಳಲಿದೆ ಕಲ್ಯಾಣ ಮಂಟಪ ಪ್ರವೇಶ ಸಭಾ ಪೂಜೆ ವಾಗ್ದಾನ ಮಧು ಪರ್ಕ ಸೀತಾನಯನ ಪ್ರಕ್ರಿಯೆ ಬಳಿಕ ಮಾಲಾರ್ಪಣೆ, ಕನ್ಯಾದಾನ ಮತ್ತು ಗೋಧೂಳಿ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಸೀತಾರಾಮರ ಮಧ್ಯೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅದೇ ಪ್ರಕ್ರಿಯೆಗಳು ವಧು ವರರ ಮಧ್ಯೆ ಏಕಕಾಲದಲ್ಲಿ ನೆರವೇರಲಿದೆ ಮಹಾಪೂಜೆ ಅಷ್ಟಾವಧಾನ ಮತ್ತು ವಿವಾಹ ಭೋಜನ ನಡೆಯಲಿದೆ.
ಧಾರ್ಮಿಕ ಸಭೆಯಲ್ಲಿ ಹೊಸದುರ್ಗ ಬೆಲಗೂರಿನ ಶ್ರೀ ಶ್ರೀ ವಿಜಯ ಮಾರುತಿ ಶರ್ಮ ಗುರುಗಳು ಹೊರನಾಡು, ಧರ್ಮಕರ್ತರಾದ ಡಾ.ಜಿ ಭೀಮೇಶ್ವರ ಜೋಶಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ ಟಿ ರಾಮಕೃಷ್ಣ ಆಸ್ರಣ್ಣರು, ಕಟೀಲಿನ ಅನುವಂಶಿಕ ಮೊಕೇಸರರಾದ ವೇ ಮೂ ಕಟೀಲು ವಾಸುದೇವ 'ಆಸ್ರಣ್ಣರು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸಮಿತಿಯ ವತಿಯಿಂದ ಪ್ರತಿ ವರ್ಷ ಸರಳ ವಿವಾಹದ ಉದ್ದೇಶಕ್ಕಾಗಿ ಮಾಂಗಲ್ಯ ನಿಧಿ ಸ್ಥಾಪನೆಗೆ ನಿರ್ಧರಿಸಲಾಗಿದೆ.
ಗಣೇಶೋತ್ಸವದ ಮಹಾಗಣಪತಿ ದೇವರ ಮೃಣ್ಮಯ ಮೂರ್ತಿಗೆ ಕೇಶವ ಎಲ್ ಶೆಟ್ಟಿ ದಂಪತಿಗಳಿಂದ ರಜತ ಕಿರೀಟ ಸಮರ್ಪಣೆ ನಡೆಯಲಿದೆ.
ಸಪ್ಟೆಂಬರ್ 7 ರಿಂದ ಮೂರು ದಿನಗಳ ಸಾರ್ವಜನಿಕ ಗಣೇಶೋತ್ಸವವು ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದ್ದು, 8ನೇ ತಾರೀಖಿನಂದು ವಿಶೇಷ ಉಷಾ: ಪೂಜೆ, ಅಷ್ಟೋತ್ತರ ಸಹಸ್ರ ಕದಳೀ ಯಾಗ ಅನ್ನ ಸಂತರ್ಪಣೆ ನೆರವೇರಲಿದೆ "ಕದಿಕೆ" ಜಾನಪದ ವೈಭವ ಹೆಸರಿನಲ್ಲಿ ಅಂತರ್ ಜಿಲ್ಲಾ ಜಾನಪದ ನೃತ್ಯ ಸ್ಪರ್ಧೆ ಮತ್ತು ಅಳಿವಿನಂಚಿನಲ್ಲಿರುವ ಜಾನಪದೀಯ ಕಲಾಕೃತಿಗಳ ರಚನಾ ಪ್ರಾತ್ಯಕ್ಷಿಕೆ, ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.
ಸೆ.9 ರಂದು ಸಂಜೆ 5 ರಿಂದ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷರಾದ ಸುಧಾಕರ ಕಾಮತ್, ಕೋಶಾಧಿಕಾರಿ ವಿಠಲ ಶೆಟ್ಟಿ , ಲಕ್ಷ್ಮೀ ಶೇಖರ್ ದೇವಾಡಿಗ ಕಾರ್ಪೋರೇಟರ್ ಅಶೋಕ್ ಕೃಷ್ಣಾಪುರ ಪ್ರಧಾನ ಕಾರ್ಯದರ್ಶಿ, ಗೌರವ ಸಲಹೆಗಾರರು ಅಣ್ಣಪ್ಪ ದೇವಾಡಿಗ ಉಪಸ್ಥಿತರಿದ್ದರು.