ಮಂಗಳೂರು: ಕೇರಳದ ಕೋಯಿಕ್ಕೋಡ್ ಬೇಪೂರ್ ಭಾಗದ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಎಂವಿ ವ್ಯಾನ್ ಹೈ 503 ಹಡಗಿನಲ್ಲಿದ್ದ ಗಾಯಗೊಂಡ ಮತ್ತು ಸುರಕ್ಷಿತರಾಗಿ ಹೊರಬಂದ ಸಿಬ್ಬಂದಿಯನ್ನು ಕರೆದುಕೊಂಡು ಬಂದ ಐಎನ್‌ಎಸ್ ಸೂರತ್ ಹಡಗು ಸೋಮವಾರ ರಾತ್ರಿ ಮಂಗಳೂರು ತಲುಪಿದೆ. ಚೀನಾದ ಎಂಟು ಮಂದಿ, ತಯ್ವಾನ್ ಮತ್ತು ಮ್ಯಾನ್ಮಾರ್‌ನ ತಲಾ ನಾಲ್ವರು, ಇಂಡೊನೇಷ್ಯಾದ ಇಬ್ಬರನ್ನು ನೌಕಾಪಡೆಯ ಹಡಗಿನಲ್ಲಿ ನವಮಂಗಳೂರು ಬಂದರು ನಿಗಮಕ್ಕೆ ಕರೆದುಕೊಂಡು ಬರಲಾಯಿತು. 10.45ರ ವೇಳೆ ತಲುಪಿದ ಹಡಗಿನಲ್ಲಿದ್ದ 18 ಮಂದಿಯ ಪೈಕಿ ಗಂಭೀರ ಗಾಯಗೊಂಡ ಇಬ್ಬರು ಸೇರಿದಂತೆ ಆರು ಮಂದಿಯನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ನೆರವಿನೊಂದಿಗೆ ಆಂಬುಲೆನ್ಸ್‌ನಲ್ಲಿ ಕುಂಟಿಕಾನದ ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗಳಿಲ್ಲದವರನ್ನು ಹೋಟೆಲ್‌ನಲ್ಲಿ ಇರಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.