ದಕ್ಷಿಣ ಕನ್ನಡ : ಭಾರಿ ಮಳೆ ಹಿನ್ನೆಲೆಯಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದು ಮೃತಪಟ್ಟ ಮಕ್ಕಳು ಸೇರಿ ನಾಲ್ವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ಶುಕ್ರವಾರ ಮುಂಜಾನೆ ಧಾರಾಕಾರ ಮಳೆಗೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನಲ್ಲಿ ನಡೆದಿತ್ತು. ಪ್ರತ್ಯೇಕ ಘಟನೆಗಳಲ್ಲಿ, ಗುಡ್ಡ ಕುಸಿತದಿಂದ ಮನೆಯ ಅವಶೇಷಗಳಡಿ ಸಿಲುಕಿ ಮೂವರು ಮಕ್ಕಳು ಹಾಗೂ ಓರ್ವ ವೃದ್ಧೆ ಪ್ರಾಣ ಕಳೆದುಕೊಂಡಿದ್ದರು.
ಉಳ್ಳಾಲದ ದೇರಳಕಟ್ಟೆಯ ಬೆಳ್ಳಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಎಂಬವರ ಮನೆ ಮೇಲೆ ಹಿಂಬದಿಯ ಗುಡ್ಡ, ತಡೆಗೋಡೆ ಕುಸಿದು ಬಿದ್ದ ಪರಿಣಾಮ ಕೊಠಡಿಯ ಕಿಟಕಿಯಡಿ ಸಿಲುಕಿ ಅವರ ಪುತ್ರಿ ನಯೀಮ (11) ಅಸುನೀಗಿದ್ದರು. ಹಾಗೆಯೇ, ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಜರಿದು ಸೀತಾರಾಂ ಮನೆಯವರು ಅವಶೇಷಗಳಡಿ ಸಿಲುಕಿಕೊಂಡ ಘಟನೆ ನಡೆದಿತ್ತು. ಮಣ್ಣಿನಡಿ ಸಿಲುಕಿದ್ದ ಸೀತಾರಾಂ ಅವರ ತಾಯಿ ಪ್ರೇಮಾ (60), ಅವರ ಪುತ್ರರಾದ ಆರ್ಯನ್ (2) ಮತ್ತು ಆರುಷ್ (3) ಮೃತಪಟ್ಟರೆ, ಸೀತಾರಾಂ ತಂದೆ ಕಾಂತಪ್ಪ ಪೂಜಾರಿ ಅವರ ಕಾಲು ಮುರಿದಿತ್ತು. ಸೀತಾರಾಂ ಪತ್ನಿ ಅಶ್ವಿನಿ ಅವರನ್ನು ರಕ್ಷಣೆ ಮಾಡಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮಳೆಯಿಂದ ಹಾನಿಗೊಳಗಾಗಿದ್ದ ಉಳ್ಳಾಲ ತಾಲೂಕಿನ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಭೇಟಿ ನೀಡಿದರು. ಕಾನೆಕೆರೆ ಪ್ರದೇಶದಲ್ಲಿ ಮೃತಪಟ್ಟ ಬಾಲಕಿ ನಯೀಮ ಹಾಗೂ ಮಂಜನಾಡಿ ಗ್ರಾಮದ ಮೊಂಟೆಪದವು ಕೋಡಿಯ ಸೀತಾರಾಂ ಕುಟುಂಬಸ್ಥರಿಗೆ ಸಚಿವರು ಸಾಂತ್ವನ ಹೇಳಿದರು.
ನೆರೆಪೀಡಿತ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಯಾವುದೇ ಹಣದ ಕೊರತೆಯ ಸಮಸ್ಯೆ ಇಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಡಳಿತವು ನೆರೆ ಪರಿಸ್ಥಿತಿ ಎದುರಿಸಲು ಸಮರ್ಥವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.