ಮಂಗಳೂರು: ಇಲ್ಲಿನ ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲದಲ್ಲಿ ಮನೆ ಮೇಲೆಯೇ ಗುಡ್ಡ ಕುಸಿದು ಸಂಭವಿಸಿರುವ ಭಾರೀ ದುರಂತದಲ್ಲಿ ಮೃತರಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಒಂದೂವರೆ ವರ್ಷದ ಮಗು ಆರುಷ್ ಮೃತಪಟ್ಟಿದೆ. ಸದ್ಯ ಅಶ್ವಿನಿಯವರನ್ನು ರಕ್ಷಿಸಲಾಗಿದೆ. ಮೂರು ವರ್ಷದ ಮಗು ಆರ್ಯನ್ ಮಲ್ಲಗಿದ್ದಲ್ಲಿಯೇ ಮೃತಪಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ 4ಗಂಟೆ ಸುಮಾರಿಗೆ ಸಂಭವಿಸಿರುವ ಈ ದುರಂತದಲ್ಲಿ ಮನೆ ಮಾಲಕ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58) ಸ್ಥಳದಲ್ಲೇ ಮೃತಪಟ್ಟಿದ್ದರು. ಕಾಂತಪ್ಪರ ಪುತ್ರ ಸೀತಾರಾಮರ ಪತ್ನಿ ಅಶ್ವಿನಿ ಹಾಗೂ ಅವರ ಇಬ್ಬರು ಮಕ್ಕಳು ಕುಸಿದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದರು.ಈ ಪೈಕಿ ಮೂರು ವರ್ಷದ ಮಗು ಆರ್ಯನ್‌ನನ್ನು ಮಧ್ಯಾಹ್ನದ ವೇಳೆ ರಕ್ಷಣಾ ತಂಡ ಅವೇಷಗಳಡಿಯಿಂದ ಹೊರ ತೆಗೆದಿತ್ತು. ಆದರೆ ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಿತ್ತು.ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಮಗು ಆಯುಷ್‌ಗೆ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹರಸಾಹಸ ಪಟ್ಟು ತಾಯಿ ಹಾಗೂ ಇನ್ನೊಂದು ಮಗು ಆರುಷ್‌ನನ್ನು ಹೊರತೆಗೆಯಲಾಗಿದೆ. ಆದರೆ ಆಗ ಉಸಿರಾಡುತ್ತಿದ್ದ ಮಗು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಉಸಿರು ಚೆಲ್ಲಿದೆ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಡ್ಡ ಕುಸಿತವಾಗಿ ಸಂಪೂರ್ಣ ಕುಸಿದ ಮನೆಯೊಳಗೆ ಸಿಲುಕಿದ್ದ ಕಾಂತಪ್ಪ ಪೂಜಾರಿ ಹಾಗೂ ಅವರ ಪುತ್ರ ಸೀತಾರಾಮರನ್ನು ಬೆಳಗ್ಗೆ ರಕ್ಷಿಸಲಾಗಿದೆ. ಕಾಂತಪ್ಪರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.