ಗುರುಪುರ ಫಲ್ಗುಣಿ ನದಿತಟದ ಗೋಳಿದಡಿಗುತ್ತುವಿನ ಸುಕ್ಷೇತ್ರ ಗುರುಪುರ ಶ್ರೀ ಗುರುಮಹಾಕಾಲೇಶ್ವರ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ ವೇದಕೃಷಿಕ ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಮೇ 15 ರಿಂದ 17 ರವರೆಗೆ ನಡೆಯಲಿದೆ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾದ ಶ್ರೀಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಏಕೈಕ ಮೂರ್ತಿಯು ಇದಾಗಿದ್ದು, ವೇದೋಕ್ತ ವಿಧಿವಿಧಾನಗಳಿಂದ ಪ್ರತಿಷ್ಠಾ, ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಗುರುಪುರ ಗೋಳಿದಡಿಗುತ್ತುವಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡು, ಮೇ 15ರಂದು ಗುರುವಾರ ಶುದ್ಧಿ ಪ್ರಕ್ರಿಯೆ, ವಾಸ್ತುಶುದ್ಧಿ ಸಹಿತ ನಾನಾ ವೇದೋಕ್ತ ವಿಧಿ ವಿಧಾನಗಳು ಪ್ರಾರಂಭವಾಗಲಿದೆ. ಬೆಳಿಗ್ಗೆ 6 ರಿಂದ 2ರವರೆಗೆ ಭಜನಾ ತಂಡಗಳಿಂದ ಭಜನೆ, ಮದ್ಯಾಹ್ನ 2-30ರಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಮಂಗಳೂರು ಇವರಿಂದ ಯಕ್ಷಗಾನ ಶ್ರೀ ಶಿವಮಹಾತ್ಮೆ. ಸಂಜೆ 5ರಿಂದ ಡಾ.ಬಿ.ವಿ. ಕುಮಾರಸ್ವಾಮಿ ಬೆಂಗಳೂರು ಇವರಿಂದ ಭಗವದ್ಗೀತಾ ಪ್ರವಚನ, ರಾತ್ರಿ 7 ರಿಂದ ರಶ್ಮಿ ರವಿ ಭಟ್ ಎರ್ಮಾಳ್ ಮತ್ತು ಅಕ್ಷತಾ ಬೈಕಾಡಿ ಇವರಿಂದ ಭರತನಾಟ್ಯ, 8ರಿಂದ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸನಾತನ ನೃತ್ಯಾಂಜಲಿ ನಡೆಯಲಿದೆ ಎಂದರು.
ಮೇ 16ರಂದು ಸಂಜೆ 4ರಿಂದ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ವಿಗ್ರಹಕ್ಕೆ ಬ್ರಹ್ಮಕಲಶಾಭಿಷೇಕವು (ಪಂಚಕಲ್ಯಾಣಯುಕ್ತ ಅಭಿಷೇಕ), ಹಾಲು, ಎಳನೀರು, ಕುಂಕುಮ, ಹರಿದ್ರೋದಕ ಮತ್ತು ಗಂಧೋಧಕ ಸಹಿತವಾದ ಪಂಚ ಕಲ್ಯಾಣಯುಕ್ತ ಅಭಿಷೇಕವು ಸಮರ್ಪಣೆಗೊಳ್ಳಲಿದೆ. ಬೆಳಗ್ಗೆ 9ರಿಂದ ಜಿಲ್ಲೆಯ ನಾನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮದ್ಯಾಹ್ನ 2.30ರಿಂದ ಯಕ್ಷಗಾನ ತಾಳಮದ್ದಳೆ ಶಿವರಾಮ ಸಂಯೋಗ, ಸಂಜೆ 5ರಿಂದ ಡಾ.ಬಿ.ವಿ. ಕುಮಾರಸ್ವಾಮಿ ಅವರಿಂದ ಭಗವದ್ಗೀತಾ ಪ್ರವಚನ, ರಾತ್ರಿ 7ರಿಂದ ಸಂದೇಶ ನೀರುಮಾರ್ಗ ಮತ್ತು ಬಳಗದಿಂದ ಭಕ್ತಿ ರಸಮಂಜರಿ ನಡೆಯಲಿದೆ ಎಂದರು.
ಮೇ 17ರಂದು ಬೆಳಗ್ಗೆ 9ರಿಂದ ನಾನಾ ತಂಡಗಳಿಂದ ಭಜನೆ, ಮದ್ಯಾಹ್ನ 7.30 ರಿಂದ ಕಲಾರತ್ನ ಶ್ರೀ ಶಂ.ನಾ. ಅಡಿಗ ಕುಂಬ್ಳೆ ಇವರಿಂದ ಹರಿಕಥಾ ಪ್ರವಚನ "ಭೂಕೈಲಾಸ", ಸಂಜೆ 5ರಿಂದ ಡಾ.ಬಿ.ವಿ. ಕುಮಾರಸ್ವಾಮಿ ಬೆಂಗಳೂರು ಇವರಿಂದ ಭಗವದ್ಗೀತಾ ಪ್ರವಚನ, ಸಂಜೆ 6 ರಿಂದ ಶಿವಾನುಭವ ಮಂಟಪ (ಧಾರ್ಮಿಕ ಸಭೆ), ರಾತ್ರಿ 8ರಿಂದ ಅರೆಹೊಳೆ ಪ್ರತಿಷ್ಠಾನದಿಂದ ನೃತ್ಯ ವೈಭವ ನಡೆಯಲಿದೆ ಎಂದು ತಿಳಿಸಿದರು.
ಸುಕ್ಷೇತ್ರಾಧ್ಯಕ್ಷರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಮಾತನಾಡಿ, ಮೇ 16ರಂದು ಶ್ರೀ ದೇವಸ್ಥಾನದ ಕಾರ್ಯಾಲಯ, ಶ್ರೀನಿತ್ಯಾನಂದ ಕಟ್ಟಡ, ದೇವಸ್ಥಾನ ಸಭಾಂಗಣ, ಶ್ರೀ ಉಮಾ ಪದ್ಮನಾಭ ಸಭಾಂಗಣ ಮತ್ತು ದೇವಸ್ಥಾನದ ಅತಿಥಿಗೃಹ ಶ್ರೀ ಶಿವಪ್ರಕಾಶವನ್ನು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮ ಋಷಿ ಶ್ರೀ ಕೆ.ಎಸ್. ನಿತ್ಯಾನಂದ ಗುರುಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಗುರುಮಹಾಕಾಲೇಶ್ವರ ದೇವರ ಬ್ರಹ್ಮಕಲಶ ಸಂಭ್ರಮಕ್ಕೆ ಮೇ 14ರ ಮದ್ಯಾಹ್ನ 3ರಿಂದ ಮೇ 15ರ ಸಂಜೆ 6ರವರೆಗೆ ಹೊರೆಕಾಣಿಕೆ ಸಮರ್ಪಿಸಬಹುದಾಗಿದೆ ಎಂದರು.
ಶ್ರೀ ಗುರುಮಹಾಕಾಲೇಶ್ವರ ಮೂರ್ತಿಯನ್ನು ಬೆಳ್ತಂಗಡಿ ಮಂಜುಶ್ರೀ ಶಿಲ್ಪಕಲಾಶಾಲೆಯ ವೆಂಕಟೇಶ ಆಚಾರ್ಯ ಮಾರ್ಗದರ್ಶನದಲ್ಲಿ ಕುಮಾರ ಶರ್ಮ ಅವರು ಕೆತ್ತಿದ್ದಾರೆ. ಮಹಕಾಲೇಶ್ವರನಿಗೆ ಸಮಸ್ತ ಆಸ್ತಿಕ ಬಂಧುಗಳಿಗೆ ಜಾತಿ, ಪಂಗಡ, ಲಿಂಗಭೇದವಿಲ್ಲದೆ ಕಲಶಾಭಿಷೇಕ ಮಾಡಲು ಮುಕ್ತ ಅವಕಾಶವಿದೆ. ಆಸ್ತಿಕ ಬಂಧುಗಳ ಮುಂಗಡವಾಗಿ ತಮ್ಮ ಹೆಸರನ್ನು ಕಲಶ ಒಂದರ ನಿಗದಿಪಡಿಸಿದ ಕಾಣಿಕೆ ನೀಡಿ ನೋಂದಾಯಿಸಬಹುದಾಗಿದೆ. ಬ್ರಹ್ಮಕಲಶ ಸಂಭ್ರಮದ ಮೂರು ದಿನಗಳಲ್ಲಿ ಅನ್ನಸಂತರ್ಪಣೆ, ಉಪಾಹಾರ, ಅತಿಥಿ ಸತ್ಕಾರ, ಭಜನಾ ಸತ್ಸಂಗ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರವಚನ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ರೋಹಿತ್ ಕುಮಾರ್ ಕಟೀಲು, ಗುರುಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಯಶವಂತ್ ಸಾಲ್ಯಾನ್ ಮೂಲ್ಕಿ, ಹೊರೆಕಾಣಿಕೆ ಮತ್ತು ಉಗ್ರಾಣ ಸಮಿತಿಯ ಸಂಚಾಲಕ ನಾರಾಯಣ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್ ಕಾವ, ಕಾರ್ಯದರ್ಶಿ ಸುನಿಲಾ ಪ್ರಭಾಕರ ಶೆಟ್ಟಿ, ದಿವ್ಯ ರತನ್ ಶೆಟ್ಟಿ ಉಪಸ್ಥಿತರಿದ್ದರು.