ಮಂಗಳೂರು: ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಮೇ 10ರಂದು ನಡೆಯಲಿರುವ ನವೋದಯ ಸ್ವಸಹಾಯ ಗುಂಪುಗಳ ಸಮಾವೇಶ 'ರಜತ ಸಂಭ್ರಮ' ರಾಜ್ಯದ ಐತಿಹಾಸಿಕ ಸಮಾವೇಶವಾಗಲಿದ್ದು, ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕರಾದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಅವರು ಇಂದು ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ನೀಲಿಬಣ್ಣದ ಸಮವಸ್ತ್ರದಲ್ಲಿ ಭಾಗವಹಿಸಲಿರುವುದು ರಾಜ್ಯದಲ್ಲೇ ಪ್ರಥಮ.
ಈ ಸಮಾವೇಶ ಮಹಿಳಾ ಸಬಲೀಕರಣ, ಸಶಕ್ತತೆಯ ಹಿನ್ನೆಲೆಯಲ್ಲಿ ಇತರರಿಗೂ ಮಾದರಿ ಆಗಬೇಕು ಎನ್ನುವುದು ನಮ್ಮ ಆಶಯ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಫರೀದ್, ಕೇಂದ್ರ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಹ್ಲಾದ್ ವಿ. ಜೋಶಿ ಮೊದಲಾದವರು ಆಗಮಿಸಲಿದ್ದಾರೆ. ನವೋದಯ ಸ್ವಸಹಾಯ ಗುಂಪುಗಳು ಗ್ರಾಮೀಣ ಜನರ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಮೂಡಿಸಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಜೊತೆಗೆ ಸಬಲೀಕರಣದ ಹಾದಿಯಲ್ಲಿ ಸಾಗುತ್ತಿದೆ. ಈ ಒಂದು ಉದಾತ್ತವಾದ ಉದ್ದೇಶವ ನ್ನಿಟ್ಟುಕೊಂಡು ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಮಾವೇಶದ ಸಂಘಟಕ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ನವೋದಯ ಸ್ವ ಸಹಾಯ ಸಂಘದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲಾ ಜನರನ್ನು ಒಳಗೊಂಡ ಸಮಾವೇಶ ಇದಾಗಿದ್ದು, 2000ನೇ ಇಸವಿಯ ಜನವರಿ 29ರಂದು ಕಾರ್ಕಳದಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಆಗಿನ ಸಹಕಾರ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಉದ್ಘಾಟಿಸಲ್ಪಟ್ಟ ನವೋದಯ ಸ್ವಸಹಾಯ ಗುಂಪುಗಳ ಕಾರ್ಯವ್ಯಾಪ್ತಿ ಇಂದು ರಾಜ್ಯದ ಎಂಟು ಜಿಲ್ಲೆಗಳಿಗೆ ಪಸರಿಸಿದ್ದು. ಇದರಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಮುಖ್ಯವಾಗಿ ಇದು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟಿದೆ. ನವೋದಯದ ರಜತ ಸಂಭ್ರಮವನ್ನು ದೇಶಕ್ಕೆ ಮಾದರಿಯಾಗಿ ಹಮ್ಮಿಕೊಳ್ಳುವ ಯೋಜನೆ ರೂಪಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನು ಓದಿ ಪ್ರದೋಷ ಉಪವಾಸದ ಲಾಭಗಳು
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್.ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು, ವಾದಿರಾಜ ಶೆಟ್ಟಿ, ಎಸ್.ಬಿ.ರಾಜೇಶ್ ರಾವ್, ಕುಶಾಲಪ್ಪ ಗೌಡ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ, ಮೇಘರಾಜ್ ಆರ್. ಜೈನ್, ಸುನೀಲ್ ಕುಮಾರ್ ಉಪಸ್ಥಿತರಿದ್ದರು.