ಮಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ವ್ಯವಸ್ಥಿತ ಸಂಚು ನಡೆಸಿದೆ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಆರೋಪಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 180 ಪರಿಶಿಷ್ಟ ಜಾತಿಗಳು ಮತ್ತು 105 ಪರಿಶಿಷ್ಟ ಬುಡಕಟ್ಟುಗಳು ಇವೆ ಎಂಬುದು ಕಾಂತರಾಜ್ ಆಯೋಗ ನಡೆಸಿದ ಜಾತಿ ಸಮೀಕ್ಷೆಯಲ್ಲಿ ಪತ್ತೆಯಾಗಿವೆ ಎಂದು ಪತ್ರಿಕಾ ವರದಿಯಾಗಿದೆ. ಆದರೆ ಕರ್ನಾಟದಲ್ಲಿ 101 ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿಸಲ್ಪಟ್ಟಿವೆ. ಜಾತಿಗಳನ್ನು ಪತ್ತೆ ಮಾಡುವ ಅಧಿಕಾರ ಆಯೋಗಕ್ಕೆ ಇಲ್ಲ. ಜಾತಿಗಳನ್ನು ಅಧಿಸೂಚನೆಗೊಳಿಸುವ ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇರುವುದು. ಹಾಗಾಗಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದ ಯಾವುದೇ ಜಾತಿಯೂ ಪರಿಶಿಷ್ಟ ಜಾತಿಯಾಗುವುದಿಲ್ಲ. ಈ ರೀತಿ ಜಾತಿ ಪರಿಗಣಿಸುವುದು ಸಂವಿಧಾನದ ಮೇಲಿನ ದಾಳಿಯಾಗಿದೆ. ರಾಜ್ಯದಲ್ಲಿ ಹಿಂದುಳಿದ ಅಥವಾ ಅತೀ ಹಿಂದುಳಿದ ಕೆಲವು ಜಾತಿಗಳು ಅಕ್ರಮ ದಾರಿ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜಾತಿ ಸರ್ಟಿಫಿಕೇಟ್ ಪಡೆಯುವ ನಿಟ್ಟಿನಲ್ಲಿ ಆಯೋಗದ ಈ ನಡೆ ಸಂವಿಧಾನ ವಿರೋಧಿ ಹಾಗೂ ದಲಿತ ವಿರೋಧಿ ಷಡ್ಯಂತ್ರ ಎಂದವರು ಹೇಳಿದರು.
ಪರಿಶಿಷ್ಟ ಬುಡಕಟ್ಟುಗಳಿಗೆ ಸಂಬಂಧಿಸಿ ಸಂವಿಧಾನದ ವಿಧಿ 342(1) ಮತ್ತು 342(2) ರಲ್ಲಿ ಇದೇ ರೀತಿಯ ನಿಯಮಗಳನ್ನು ಪ್ರಸ್ತಾವಿಸಲಾಗಿದೆ. ಪ್ರಸಕ್ತ ರಾಜ್ಯದಲ್ಲಿ ಪರಿಶಿಷ್ಟ ಬುಡಕಟ್ಟುಗಳ ಪಟ್ಟಿಯಲ್ಲಿ 49 ಜಾತಿಗಳು ಅಧಿಸೂಚನೆಗೊಂಡಿವೆ. ಕಾಂತರಾಜ್ ಆಯೋಗವು ರಾಜ್ಯದಲ್ಲಿ 105 ಪರಿಶಿಷ್ಟ ಬುಡಕಟ್ಟುಗಳನ್ನು ಪತ್ತೆ ಮಾಡಿದೆ ಎಂಬುದು ಪರಿಶಿಷ್ಟ ಬುಡಕಟ್ಟುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದು ನೈಜ ಬುಡಕಟ್ಟುಗಳಿಂದ ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಭಾಗ. ಈ ವಿಷಯದಲ್ಲಿ ಅಗತ್ಯ ಬಿದ್ದರೆ ಆಯೋಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂತಪ್ಪ ಆಲಂಗಾರು ಮತ್ತು ಪದ್ಮನಾಭ ಉಪಸ್ಥಿತರಿದ್ದರು.