ಮಂಗಳೂರು: ಆರು ದಶಕಗಳ ಕಾಲ ಮಂಗಳೂರಿನ ಹೃದಯ ಭಾಗಗದಲ್ಲಿ ಮಿಂಚುತ್ತಿದ್ದ "ಮೋತಿ ಮಹಲ್ ಹೋಟೆಲ್" ಬಾಗಿಲು ಮುಚ್ಚಲು ಸಜ್ಜಾಗುತ್ತಿರುವ ಸುದ್ದಿ ಮಂಗಳೂರಿಗರ ಮನಸ್ಸು ಭಾರವಾಗಿಸಿದೆ. ನಗರದ ಅತಿಥಿ ಸತ್ಕಾರದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಹೋಟೆಲ್ ಇನ್ನು ನೆನಪು ಮಾತ್ರವಾಗಲಿದೆ.
ಮೋತಿ ಮಹಲ್ ನ ಹೋಟೆಲಿನ ಮಾಲಕರಿಗೆ ಹಾಗೂ ಅದರ ಜಮೀನಿನ ಮೂಲ ಮಾಲೀಕರಿಗೆ ಕಳೆದ ಹಲವು ದಶಕಗಳಿಂದ ನಡೆಯುತ್ತಿದ್ದ ಸಿವಿಲ್ ವ್ಯಾಜ್ಯದ ತೀರ್ಪು ಸುಪ್ರೀಂ ಕೋರ್ಟ್ ನಲ್ಲಿ ಹೊರ ಬಿದ್ದಿದ್ದು, ತೀರ್ಪಿನ ಪ್ರಕಾರ, ಮೋತಿ ಮಹಲ್ ಅನ್ನು ಏಪ್ರಿಲ್ ಅಂತ್ಯದೊಳಗೆ ಅದರ ಜಮೀನಿನ ಮಾಲೀಕರಿಗೆ ಹಿಂದಿರುಗಿಸಬೇಕಾಗಿದ್ದು, ಜೊತೆಗೆ 3 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕಾಗಿದೆ. ಈ ಮೂಲಕ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಅಂಕದ ಪರದೆ ಬಿದ್ದಿದೆ.
ಉದ್ಯಮಿ ಎ.ಜೆ. ಶೆಟ್ಟಿಯವರ ದೂರದೃಷ್ಟಿಯ ಫಲವಾಗಿ 1966 ರಲ್ಲಿ ತಲೆ ಎತ್ತಿದ ಈ ಹೋಟೆಲ್, ಅಂದಿನ ಕಾಲಘಟ್ಟದಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿತ್ತು. ಜಿಮ್ ಮತ್ತು ಈಜುಕೊಳವನ್ನು ಹೊಂದಿದ ಮಂಗಳೂರಿನ ಮೊದಲ ಹೋಟೆಲ್ ಎಂಬ ಹೆಗ್ಗಳಿಕೆ ಇದರದು. ಮಂಗಳ ಮಲ್ಟಿ ಕುಸಿನ್, ಮಧುವನ್ ವೆಜ್, ಮೆಕ್ಸಿಲ್ ಬಾರ್, ತೈಚಿನ್ ಚೈನೀಸ್ ರೆಸ್ಟೋರೆಂಟ್ ಮತ್ತು ಸಿಹಿ ತಿನಿಸುಗಳ ವಿಭಾಗ, ಶೀತಲ್ ಈಜುಕೊಳ... ಇವೆಲ್ಲವೂ ಮಂಗಳೂರಿನ ಮೊದಲ ಐಷಾರಾಮಿ ಮತ್ತು ವಾಣಿಜ್ಯ ಹೋಟೆಲ್ ಗೆ ಮೆರುಗು ಹೆಚ್ಚಿಸಿದ್ದವು. 90 ಸುಸಜ್ಜಿತ ಕೊಠಡಿಗಳು, ವಿಶಾಲವಾದ ಸಭಾಂಗಣವಿದ್ದ ಈ ಕಟ್ಟಡ ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ ಮೊದಲಾದ ಹಲವಾರು ಸಮಾರಂಭಕ್ಕೆ ಸಾಕ್ಷಿಯಾಗಿತ್ತು.