ಮಂಗಳೂರು: ಸಹಕಾರಿ ಧುರೀಣ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸಮಾಜ ಸೇವೆ ಸಲ್ಲಿಸಿದ ಅಪೂರ್ವ ಸಾಧನೆಗಾಗಿ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ. ವಿವಿಯ 43ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಗಣ್ಯರ ಸಮ್ಮುಖದಲ್ಲಿ ಪದವಿ ಪ್ರದಾನ ಮಾಡಿದರು. ಈ ಮೂಲಕ ಅವರಿಗೆ ಎರಡನೇ ಗೌರವ ಡಾಕ್ಟರೇಟ್ ಪದವಿ ಸಿಕ್ಕಿದಂತಾಗಿದೆ. ಈ ಹಿಂದೆ ಸಹಕಾರಿ ಅವರಿಗೆ 2013ರಲ್ಲಿ ಶ್ರೀಲಂಕಾದ ಕೊಲಂಬೋ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿತ್ತು. ಸಹಕಾರ, ಸಾಮಾಜಿಕ, ಬ್ಯಾಂಕಿಂಗ್, ಧಾರ್ಮಿಕ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿ, ಹರಿಕಾರ ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ರಾಜೇಂದ್ರ ಕುಮಾರ್ ರಾಜ್ಯದ ಧಿಮಂತ ಸಹಕಾರಿ ನಾಯಕರಲ್ಲಿ ಒಬ್ಬರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷತೆ ಜತೆಗೆ ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ, ಪ್ರಾಮಾಣಿಕ ಸೇವೆಯನ್ನು ಕಳೆದ 31 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಮಾಡುತ್ತಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕ್‌ನ್ನು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟತಂತ್ರಜ್ಞಾನವನ್ನು ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ್ದಾರೆ ರಾಜೇಂದ್ರ ಕುಮಾರ್.